ಪ್ರಧಾನಿ ನರೇಂದ್ರ ಮೋದಿ ಆಸ್ತಿ ಏರಿಕೆ

By Web DeskFirst Published Sep 19, 2018, 2:35 PM IST
Highlights

ಆ ಪ್ರಕಾರ, ಮೋದಿ ಅವರ ಒಟ್ಟಾರೆ ಆಸ್ತಿ ಸುಮಾರು 2 ಕೋಟಿ ರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೋದಿ ಆಸ್ತಿ ಸುಮಾರು 23 ಲಕ್ಷ ರು.ಹೆಚ್ಚಳವಾಗಿ 2.28 ಕೋಟಿ ತಲುಪಿದೆ.

ನವದೆಹಲಿ[ಸೆ.19]: ಪ್ರಧಾನಿ ನರೇಂದ್ರ ಮೋದಿ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದು, ಅವರ ಸಂಪತ್ತು ಕಳೆದ ವರ್ಷಕ್ಕಿಂತ 28 ಲಕ್ಷ ರು. ಏರಿಕೆಯಾಗಿದೆ. ಕಳೆದ ವರ್ಷ 2 ಕೋಟಿ ರು. ಇದ್ದ ಮೋದಿ ಆಸ್ತಿ, ಈ ವರ್ಷ 2.28 ಕೋಟಿ ರು.ಗಳಿಗೆ ಹೆಚ್ಚಳವಾಗಿದೆ.

13 ವರ್ಷಗಳ ಕಾಲ ನಿರಂತರವಾಗಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ, 4 ವರ್ಷಗಳಿಂದ ಪ್ರಧಾನಿಯಾಗಿರುವ ಮೋದಿ ಅವರ ಬಳಿ ಸ್ವಂತ ಕಾರೂ ಇಲ್ಲ, ಬೈಕೂ ಇಲ್ಲ! ಮೋದಿ ಅವರು ಸ್ವಯಂಪ್ರೇರಿತರಾಗಿ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಅದರ ವಿವರಗಳನ್ನು ಪ್ರಧಾನಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿದೆ.

ಆ ಪ್ರಕಾರ, ಮೋದಿ ಅವರ ಒಟ್ಟಾರೆ ಆಸ್ತಿ ಸುಮಾರು 2 ಕೋಟಿ ರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೋದಿ ಆಸ್ತಿ ಸುಮಾರು 23 ಲಕ್ಷ ರು. ಹೆಚ್ಚಳವಾಗಿ 2.28 ಕೋಟಿ ತಲುಪಿದೆ. ಅವರ ಕೈಯಲ್ಲಿ 48,944 ರು. ನಗದು ಇದೆ. ಹಿಂದಿನ ವರ್ಷ ಈ ಪ್ರಮಾಣ 89700 ರು. ಆಗಿತ್ತು. ಇನ್ನು ಗುಜರಾತಿನ ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಯಲ್ಲಿ 11,29,690 ರು. ಠೇವಣಿ ಇರಿಸಿದ್ದಾರೆ.

ಮತ್ತೊಂದು ಖಾತೆಯಲ್ಲಿ 1,07,96,288 ರು. ಹೊಂದಿದ್ದಾರೆ. ಅಂದಹಾಗೆ ಮೋದಿ ಅವರ ಬಳಿ ಕಾರ್ ಅಥವಾ ಬೈಕ್ ಇಲ್ಲ. ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ಮೌಲ್ಯ 1,38,060 ರು. ಯಾವುದೇ ಸಾಲವನ್ನು ಮೋದಿ ಮಾಡಿಲ್ಲ. ತೆರಿಗೆ ಉಳಿಸುವ ಸಲುವಾಗಿ ಎಲ್ ಆ್ಯಂಡ್ ಟಿ ಕಂಪನಿಯ ಮೂಲಸೌಕರ್ಯ ಬಾಂಡ್‌ನಲ್ಲಿ ಅವರು 20 ಸಾವಿರ ರು. ತೊಡಗಿಸಿದ್ದಾರೆ. ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ 5,18,235 ರು. ಹೂಡಿದ್ದಾರೆ. 1,59,281 ರು. ಮೌಲ್ಯದ ಎಲ್‌ಐಸಿ ಪಾಲಿಸಿಗಳನ್ನು ಹೊಂದಿದ್ದಾರೆ. ಗುಜರಾತಿನ ಗಾಂಧಿನಗರದಲ್ಲಿ 2002ರಲ್ಲಿ 1,30,488 ರು.ಗೆ ನಿವೇಶನವೊಂದನ್ನು ಖರೀದಿಸಿದ್ದರು. ಅದರಲ್ಲಿ ವಸತಿ ಕಟ್ಟಡ ನಿರ್ಮಾಣವಾಗಿದ್ದು, ನಾಲ್ಕನೇ ಒಂದು ಭಾಗದಷ್ಟು ಪಾಲು ಹೊಂದಿದ್ದಾರೆ. ಅದರ ಮೌಲ್ಯ 1 ಕೋಟಿ ರು. ಆಗುತ್ತದೆ.

click me!