
ಆಗ್ರಾ[ಜೂ.24]: ಅಪ್ಲಾಸ್ಟಿಕ್ ಅನಿಮಿಯಾದಿಂದ ಬಳಲುತ್ತಿದ್ದ ಮಗಳ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದ ರೈತನಿಗೆ ನೆರವಿನ ಹಸ್ತ ಚಾಚಿದ ಪ್ರಧಾನಿ ಮೋದಿ ಆತನ ಆತಂಕ ದೂರ ಮಾಡಿದ್ದಾರೆ. ಬಡ ರೈತನ ಮನವಿಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಬಾಲಕಿಯ ಚಿಕಿತ್ಸೆಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 30ಲಕ್ಷ ರೂಪಾಯಿ ಸಹಾಯಧನ ಬಿಡುಗಡೆಗೊಳಿಸಿದೆ.
ಹೌದು ಆರ್ಥಿಕವಾಗಿ ಹಿಂದುಳಿದಿದ್ದ ಆಗ್ರಾದ ಸುಮೇರ್ ಸಿಂಗ್ ಕುಟುಂಬಕ್ಕೆ ಮಗಳ ಕಾಯಿಲೆ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ತಮ್ಮ ಮಗಳು ಅಪರೂಪದ ಅಪ್ಲಾಸ್ಟಿಕ್ ಅನಿಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾಳೆಂದು ಅರಿತ ಕುಟುಂಬ ಆಕೆಯ ಚಿಕಿತ್ಸೆಗಾಗಿ ಬಹಳಷ್ಟು ಯತ್ನಿಸಿದ್ದಾರೆ. ಮಗಳು ಗುಣಮುಖವಾಗಬೇಕೆಂದು ತಮ್ಮ ಜಮೀನನ್ನೂ ಮಾರಿದ್ದಾರೆ. ಮನೆ ಮಾರಿದ ಹಣ, ಸಾಲ ಪಡೆದ ಹಣ ಎಂದು ಈಗಾಗಲೇ ಬರೋಬ್ಬರಿ 7 ಲಕ್ಷ ರೂಪಾಯಿ ಮೊತ್ತ ಮಗಳಿಗೆ ಚಿಕಿತ್ಸೆ ಕೊಡಿಸಲು ವ್ಯಯಿಸಿದ್ದಾರೆ. ಹೀಗಿದ್ದರೂ ಆಕೆ ಗುಣಮುಖಳಾಗಲಿಲ್ಲ.
ಬಡತನದಲ್ಲಿದ್ದ ಕುಟುಂಬ ಮನೆ, ಜಮೀನು ಮಾರಾಟ ಮಾಡಿತ್ತು. ಹೀಗಿದ್ದರೂ ಮಗಳು ಗುಣಮುಖಳಾದಾಗ ಚಿಂತೆ ಆವರಿಸಿತ್ತು. ಒಂದೆಡೆ ಕಾಡುವ ಬಡತನ, ಮತ್ತೊಂದೆಡೆ ಮಗಳ ನರಳಾಟ ಇವೆರಡೂ ಆ ಕುಟುಂಬಕ್ಕೆ ನುಂಗಲಾರದ ತುತ್ತಾಗಿತ್ತು. ಹೀಗಿರುವಾಗ ತಂದೆ ಸುಮೇರ್ ಸಿಂಗ್ ಕೊನೆಯ ಯತ್ನ ಎಂಬಂತೆ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದು ತನ್ನ ಆರ್ಥಿಕ ಸ್ಥಿತಿ, ಮಗಳ ಪರಿಸ್ಥಿತಿ ಸಂಪೂರ್ಣವಾಗಿ ವಿವರಿಸಿದ್ದಾನೆ. ಅಲ್ಲದೇ ಮಗಳು ಗುಣಮುಖಳಾಗದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು.
ಸುಮೇರ್ ಸಿಂಗ್ ಮನವಿಯನ್ನು ಸ್ವೀಕರಿಸಿದ ಪ್ರಧಾನ ಮಂತ್ರಿ ಕಚೇರಿ ಸುಮೇರ್ ಸಿಂಗ್ ವಿವರಿಸಿದ್ದು ನಿಜವೇ ಎಂಬುವುದನ್ನು ಪರಿಶೀಲಿಸಿದೆ. ಇದು ನಿಜ ಎಂದು ಮನಗಂಡ ಪಿಎಂಒ ಕೂಡಲೇ ಬಾಲಕಿಯ ಚಿಕಿತ್ಸೆಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 30 ಲಕ್ಷ ಬಿಡುಗಡೆಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.