
ರಾಯ್‌ಬರೇಲಿ[ಡಿ.17]: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸ್ವಕ್ಷೇತ್ರ, ಉತ್ತರಪ್ರದೇಶದ ರಾಯ್‌ಬರೇಲಿಗೆ ಭೇಟಿ ನೀಡಿದ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ರಕ್ಷಣಾ ವ್ಯವಹಾರಗಳನ್ನು ಕುದುರಿಸಲು ಕ್ವಟ್ರೋಕಿ ಮಾಮಾ ಆಗಲೀ ಅಥವಾ ಕ್ರಿಸ್ಟಿಯನ್ ಮಿಶೆಲ್ ಮಾಮಾ ಆಗಲೀ ಇಲ್ಲ. ಹೀಗಾಗಿ ಆಕ್ರೋಶಗೊಂಡಿರುವ ಕಾಂಗ್ರೆಸ್, ಸುಳ್ಳುಗಳನ್ನು ಹೇಳುತ್ತಿದೆ. ನ್ಯಾಯಾಂಗದ ಬಗ್ಗೆಯೂ ಅಪನಂಬಿಕೆ ಸೃಷ್ಟಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.
ರಾಯ್‌ಬರೇಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿದ ಬಳಿಕ ಮೋದಿ ಅವರು ಬೃಹತ್ ರಾರಯಲಿ ಉದ್ದೇಶಿಸಿ ಮಾತನಾಡಿದರು. ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿದ ಬಳಿಕ ಹಾಗೂ ಪಂಚರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮೋದಿ ನಡೆಸಿದ ಮೊದಲ ರಾರಯಲಿ ಇದಾಗಿತ್ತು. ತಮ್ಮ 50 ನಿಮಿಷಗಳ ಭಾಷಣದಲ್ಲಿ 30 ನಿಮಿಷವನ್ನು ರಫೇಲ್ ಕುರಿತ ವಿಚಾರಕ್ಕೇ ಪ್ರಧಾನಿ ಮೀಸಲಿಟ್ಟಿದ್ದು ವಿಶೇಷವಾಗಿತ್ತು.
‘ಸುಳ್ಳೇ ಸುಳ್ಳು...’:
ದೇಶದ ಮುಂದೆ ಎರಡು ಮುಖಗಳಿವೆ. ಒಂದು- ಸಶಸ್ತ್ರ ಪಡೆಗಳಿಗೆ ಶಕ್ತಿ ತುಂಬಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರ. ಮತ್ತೊಂದು- ಹೇಗಾದರೂ ಮಾಡಿ ದೇಶವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ಶಕ್ತಿಗಳು. ಭಾರತದ ಸಶಸ್ತ್ರ ಪಡೆಗಳು ಶಕ್ತಿಶಾಲಿಯಾಗಬಾರದು ಎಂದು ಬಯಸುವ ಶಕ್ತಿಗಳ ಜತೆಗೆ ಕಾಂಗ್ರೆಸ್ ಗುರುತಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ರಕ್ಷಣಾ ಸಚಿವಾಲಯ, ರಕ್ಷಣಾ ಸಚಿವರು, ಭಾರತೀಯ ವಾಯುಪಡೆ ಅಧಿಕಾರಿಗಳು, ಫ್ರಾನ್ಸ್ ಸರ್ಕಾರ ಎಲ್ಲವೂ ಈ ವ್ಯಕ್ತಿಗಳಿಗೆ ಸುಳ್ಳು. ಸುಪ್ರೀಂಕೋರ್ಟ್ ಕೂಡ ಸುಳ್ಳಾಗಿಯೇ ಕಾಣುತ್ತಿದೆ ಎಂದು ಹೇಳಿದ ಮೋದಿ, ರಾಮಚರಿತ ಮಾನಸ ಉಲ್ಲೇಖಿಸಿ ‘ಕೆಲವು ವ್ಯಕ್ತಿಗಳು ಸುಳ್ಳನ್ನು ಮಾತ್ರ ಸ್ವೀಕರಿಸುತ್ತಾರೆ, ಅದನ್ನೇ ಇತರರಿಗೂ ಹಂಚುತ್ತಾರೆ’ ಎಂದು ಹರಿಹಾಯ್ದರು.
ಹಿಂದಿನ ರಕ್ಷಣಾ ಒಪ್ಪಂದಗಳು ಕಳಂಕದಿಂದ ಕೂಡಿದ್ದವು. ಕಾಂಗ್ರೆಸ್ಸಿನ ಆಳ್ವಿಕೆಯಲ್ಲಿ ಆ ಒಪ್ಪಂದಗಳು ಕ್ವಟ್ರೋಕಿ ಮಾಮಾಗೆ ಸೇರಿದ್ದವು ಎಂದು ಹೇಳಿದರು. ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ ಕುರಿತು ಮಾತನಾಡಿದ ಅವರು, ಕ್ವಟ್ರೋಕಿಯಂತಹ ಮತ್ತೊಬ್ಬ ಮಾಮಾ ಕ್ರಿಸ್ಟಿಯನ್ ಮಿಶೆಲ್‌ನನ್ನು ಕೆಲವು ದಿನಗಳ ಹಿಂದೆ ನಾವು ಕರೆತಂದಿದ್ದೇವೆ. ಆತನನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ತನ್ನ ವಕೀಲರನ್ನೇ ಕೋರ್ಟಿಗೆ ಕಳುಹಿಸಿಕೊಟ್ಟಿದೆ ಎಂದು ಚುಚ್ಚಿದರು.
ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1986ರಲ್ಲಿ ಬೊಫೋರ್ಸ್ ಫಿರಂಗಿಗಳನ್ನು ಖರೀದಿಸಲು ಒಪ್ಪಂದವೇರ್ಪಟ್ಟಿತ್ತು. ಆ ಸಂದರ್ಭದಲ್ಲಿ ಇಟಲಿ ಮೂಲದ ಉದ್ಯಮಿ ಒಟ್ಟಾವಿಯೋ ಕ್ವಟ್ರೋಕಿ ದಲ್ಲಾಳಿ ಪಾತ್ರ ನಿರ್ವಹಿಸಿದ್ದ. ಅದೇ ರೀತಿ, ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಾಗ ದಲ್ಲಾಳಿಯಾಗಿ ಕೆಲಸ ಮಾಡಿದ ಮೂವರಲ್ಲಿ ಕ್ರಿಸ್ಟಿಯನ್ ಮಿಶೆಲ್ ಕೂಡ ಒಬ್ಬ.
10 ವರ್ಷ ತಡೆದವರು ಯಾರು?:
‘ಕಾರ್ಗಿಲ್ ಸಮರದ ಬಳಿಕ ಆಧುನಿಕ ವಿಮಾನಗಳ ಅಗತ್ಯವನ್ನು ದೇಶ ಮನಗಂಡಿತು. ಕಾಂಗ್ರೆಸ್ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದರೂ ವಾಯುಪಡೆ ಬಲಗೊಳ್ಳಲು ಬಿಡಲಿಲ್ಲ. ಅದಕ್ಕೆ ಯಾರ ಒತ್ತಡ ಕಾರಣ? 2009ರಲ್ಲಿ ಭಾರತೀಯ ಸೇನೆ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್‌ಗಳಿಗೆ ಬೇಡಿಕೆ ಇಟ್ಟಿತ್ತು. ಯುಪಿಎ-2ನೇ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಅದನ್ನು ಖರೀದಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ 2016ರಲ್ಲಿ 50 ಸಾವಿರ ಜಾಕೆಟ್‌ಗಳನ್ನು ಖರೀದಿಸಿದೆವು. 1.86 ಲಕ್ಷ ಜಾಕೆಟ್‌ಗಳನ್ನು ಸ್ಥಳೀಯವಾಗಿ ಖರೀದಿಸಲು ಆರ್ಡರ್ ಕೊಟ್ಟಿದ್ದೇವೆ’ ಎಂದು ಮೋದಿ ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ