ಮೇಯರ್‌ ಆದರೂ ಮನೆಗೆ ಹಾಲು ಹಾಕೋದು ಬಿಡಲ್ಲ

By Web DeskFirst Published Dec 17, 2018, 8:25 AM IST
Highlights

ಅಧಿಕಾರ, ದೊಡ್ಡ ಹುದ್ದೆ ಸಿಕ್ಕ ಕೂಡಲೇ, ಹಿಂದೆ ಮಾಡುತ್ತಿದ್ದ ಕೆಲಸಗಳನ್ನು ಬಿಡುವವರೇ ಹೆಚ್ಚು. ಆದರೆ ಇಲ್ಲೊಬ್ಬ ಮೇಯರ್ ಮಾತ್ರ ತಮ್ಮ ಮೂಲ ವೃತ್ತಿ ಬಿಡದೆ ಸರಳತೆಗೆ ಒತ್ತು ನೀಡಿದ್ದಾರೆ.

ತ್ರಿಶ್ಶೂರು[ಡಿ.17]: ಅಧಿಕಾರ, ದೊಡ್ಡ ಹುದ್ದೆ ಸಿಕ್ಕ ಕೂಡಲೇ, ಹಿಂದೆ ಮಾಡುತ್ತಿದ್ದ ಕೆಲಸಗಳನ್ನು ಬಿಡುವವರೇ ಹೆಚ್ಚು. ಅಂಥರದಲ್ಲಿ ಕೇರಳದ ತ್ರಿಶ್ಯೂರಿನ ನೂತನ್‌ ಮೇಯರ್‌ ಆಗಿ ಆಯ್ಕೆಯಾಗಿರುವ ಅಜಿತಾ ವಿಜಯನ್‌, ದೊಡ್ಡ ಹುದ್ದೆ ಸಿಕ್ಕರೂ, 18 ವರ್ಷಗಳಿಂದ ತಾವು ಮಾಡಿಕೊಂಡು ಬಂದಿದ್ದ ಮನೆ ಮನೆಗೆ ಹಾಲು ಹಾಕುವ ಕೆಲಸ ಮುಂದುವರೆಸಲು ನಿರ್ಧರಿಸಿದ್ದಾರೆ.

1999ರಿಂದ ಸಿಪಿಎಂ ಸದಸ್ಯೆಯಾಗಿದ್ದ ಅಜಿತಾ, 2005ರಲ್ಲಿ ಮೊದಲ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾದರು. ಇದೀಗ ಅವರಿಗೆ ಮೇಯರ್‌ ಪಟ್ಟಒಲಿದು ಬಂದಿದೆ. ಇದರ ಹೊರತಾಗಿಯೂ ಅಜಿತಾ, ತಮ್ಮ ದ್ವಿಚಕ್ರ ವಾಹನದಲ್ಲೇ ತ್ರಿಶ್ಶೂರು ಕನಿಮಂಗಳಂ ವ್ಯಾಪ್ತಿಯಲ್ಲಿರುವ 200 ಮನೆಗಳಿಗೆ ಹಾಲು ಹಾಕುವ ಕೆಲಸ ಮುಂದುವರೆಸುವುದಾಗಿ ಹೇಳಿದ್ದಾರೆ. ಇದರಿಂದ ವಿವಿಧ ರೀತಿಯ ಜನರ ಭೇಟಿ ಸಾಧ್ಯವಾಗುತ್ತದೆ. ಅಲ್ಲದೆ, ಜನಸಾಮಾನ್ಯರ ಜೊತೆ ನೇರವಾಗಿ ಸಮಾಲೋಚನೆ ನಡೆಸಬಹುದು. ಇದರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಸಾಮಾನ್ಯವಾಗಿ ಉದ್ಘಾಟನೆ, ಶಿಲಾನ್ಯಾಸ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ಬೆಳಗ್ಗೆ 10 ಗಂಟೆಗೆ ಆರಂಭವಾಗುತ್ತವೆ. ಆದರೆ, ಬೆಳಗಿನ ಜಾವ 4.30ಕ್ಕೆ ಎದ್ದು, ಬೆಳಗ್ಗೆ 6 ಗಂಟೆ ವೇಳೆಗೆ ಹಾಲು ಪೂರೈಸುವ ಕೆಲಸವನ್ನು ಮುಕ್ತಾಯಗೊಳಿಸಬಹುದು. ಹಾಗಾಗಿ, ಮೇಯರ್‌ ಆದರೂ, ಹಾಲು ಹಾಕುವ ವೃತ್ತಿ ಮಾತ್ರ ತ್ಯಜಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

click me!