ವ್ಯಾಪಾರದ ಹಳೆ ದಾಖಲೆ ಕೆದಕಲ್ಲ: ಮೋದಿ

Published : Oct 23, 2017, 12:51 PM ISTUpdated : Apr 11, 2018, 12:59 PM IST
ವ್ಯಾಪಾರದ ಹಳೆ ದಾಖಲೆ ಕೆದಕಲ್ಲ: ಮೋದಿ

ಸಾರಾಂಶ

ಜಿಎಸ್‌ಟಿ ವ್ಯಾಪ್ತಿಗೆ ಬರುವವರಿಗೆ ಐಟಿ ತೊಂದರೆ ಕೊಡಲ್ಲ: ಗುಜರಾತ್’ನಲ್ಲಿ ಪ್ರಧಾನಿ  ಮೋದಿ ಹೇಳಿಕೆ

ದಹೇಜ್,ಗುಜರಾತ್: ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಂದ ಒಂದಿಲ್ಲೊಂದು ವಿರೋಧ ಎದುರಿಸುತ್ತಿರುವ ಕೇಂದ್ರ ಸರ್ಕಾರ ಈಗ ವ್ಯಾಪಾರಿಗಳಿಗೆ ಇನ್ನೊಂದು ಸಮಾಧಾನದ ಸಂದೇಶ ರವಾನಿಸಿದೆ.

‘ಯಾರು ವ್ಯಾಪಾರಸ್ಥರು ಹೊಸ ಜಿಎಸ್‌ಟಿ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ನೋಂದಾಯಿಸಿ ಕೊಳ್ಳುತ್ತಾರೋ ಅವರ ಹಳೆಯ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲಿಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ತವರು ರಾಜ್ಯ ಗುಜರಾತ್‌ನ ದಹೇಜ್ ನಲ್ಲಿ ಭಾನುವಾರ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಈ ಘೋಷಣೆ ಮಾಡಿದರು.

‘ಅನೇಕ ವ್ಯಾಪಾರಿಗಳು ಜಿಎಸ್‌ಟಿ ಸೇರುವ ಸಂದರ್ಭದಲ್ಲಿ ಎಲ್ಲಿ ನಮ್ಮ ಹಳೆಯ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆದಕುತ್ತಾರೋ ಎಂಬ ಭಯ ಹೊಂದಿರುತ್ತಾರೆ. ಆದರೆ ಮುಖ್ಯವಾಹಿನಿಗೆ ಬರಲು ಇಚ್ಛಿಸುವ ಯಾವುದೇ ವ್ಯಾಪಾರಿಯ ಹಳೆಯ ದಾಖಲೆಗಳನ್ನು ಆದಾಯ ತೆರಿಗೆಯವರು ಕೆದಕುವುದಿಲ್ಲ ಎಂಬ ಭರವಸೆ ನೀಡಬಯಸುತ್ತೇನೆ’ ಎಂದು ಪ್ರಧಾನಿ ವಾಗ್ದಾನ ಮಾಡಿದರು.

‘ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿ ವ್ಯವಸ್ಥೆಗೆ ಅನೇಕ ವ್ಯಾಪಾರಿಗಳು ನೋಂದಾಯಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ 27 ಲಕ್ಷ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದಾರೆ. ಯಾವ ವ್ಯಾಪಾರಿಯೂ ತೆರಿಗೆ ವಂಚನೆ ಮಾಡಲು ಬಯಸುವುದಿಲ್ಲ. ಆದರೆ ನಿಯಮಗಳು, ವ್ಯವಸ್ಥೆ, ತೆರಿಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಂದ ಒತ್ತಡ ಬರುವ ಪರಿಣಾಮ ಅವರು ವಂಚನೆಗೆ ಕೈಹಾಕಬೇಕಾಗುತ್ತದೆ’ ಎಂದು ಮೋದಿ ವಿಷಾದಿಸಿದರು.

‘ಜಿಎಸ್‌ಟಿಯಿಂದಾಗಿ ರಾಜ್ಯಗಳ ಗಡಿಗಳು ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ. ಲಾರಿಗಳು ದಿನಗಟ್ಟಲೇ ಗಡಿಗಳಲ್ಲಿ ಕಾಯಬೇಕಿಲ್ಲ. ಈ ಕಠಿಣ ಕ್ರಮ ಕೈಗೊಂಡಿದ್ದರಿಂದ ಭ್ರಷ್ಟರು ನನ್ನ ಮೇಲೆ ಸಿಟ್ಟಾಗಿದ್ದಾರೆ’ ಎಂದು ಅವರು ಚಟಾಕಿ ಹಾರಿಸಿದರು. 

ಇನ್ನು ದೇಶದ ಅರ್ಥವ್ಯವಸ್ಥೆಯ ಬಗ್ಗೆ ಮಾತನಾಡಿದ ಅವರು, ‘ಆರ್ಥಿಕ ಸುಧಾರಣಾ ಕ್ರಮಗಳು ಮುಂದುವರಿಯಲಿವೆ. ಅರ್ಥವ್ಯವಸ್ಥೆ ಸರಿದಾರಿಯಲ್ಲಿದೆ ಎಂದು ಅರ್ಥತಜ್ಞರೇ ಹೇಳಿದ್ದಾರೆ. ಕಲ್ಲಿದ್ದಲು, ವಿದ್ಯುತ್, ನೈಸರ್ಗಿಕ ಅನಿಲ, ಇತರ ವಸ್ತುಗಳ ಉತ್ಪಾದನೆ ಹೆಚ್ಚಿದೆ. ವಿದೇಶಿ ವಿನಿಮಯ ಸಂಗ್ರಹ 30 ಸಾವಿರ ಕೋಟಿ ಡಾಲರ್‌ನಿಂದ 40 ಸಾವಿರ ಕೋಟಿ ಡಾಲರ್‌ಗೆ ಏರಿದೆ’ ಎಂದು ಮೋದಿ ಅವರು ಟೀಕಾಕಾರರಿಗೆ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!