
ನವದೆಹಲಿ: ಕರ್ನಾಟಕ ಚುನಾವಣೆ ಕಾವೇರುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಅಹಿಂದ’ ಹಾಗೂ ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದಾರೆ. ಆದರೆ ಕಾಂಗ್ರೆಸ್ ವಿರುದ್ಧ ‘ಒಬಿಸಿ ಅಸ್ತ್ರ’ ಪ್ರಯೋಗಿಸಲು ಕೇಸರಿ ಪಕ್ಷ ಮುಂದಾಗಿದೆ.
ಹಿಂದುಳಿದ ವರ್ಗ ಆಯೋಗಕ್ಕೆ (ಒಬಿಸಿ ಕಮಿಶನ್) ಸಾಂವಿಧಾನಿಕ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಮಸೂದೆ ಇನ್ನೂ ಅಂಗೀಕಾರವಾಗಿಲ್ಲ. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಕೆಲವು ಆಕ್ಷೇಪಗಳನ್ನು ಎತ್ತಿದ ಕಾರಣಕ್ಕೆ ಇದು ಅಂಗೀಕಾರಗೊಂಡಿಲ್ಲ. ಹೀಗಾಗಿ ಇದೇ ವಿಷಯವನ್ನು ಮುಂದೆ ಮಾಡಿಕೊಂಡು ಗುಜರಾತ್ ಹಾಗೂ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತೀರ್ಮಾನಿಸಿದೆ.
ಇದಲ್ಲದೆ, ಒಬಿಸಿಗೆ ಸಿಗಬೇಕಾದ ಸರ್ಕಾರಿ ಸವಲತ್ತುಗಳ ಕೆನೆಪದರ ಮಿತಿಯನ್ನು 6 ಲಕ್ಷ ರು.ನಿಂದ 8 ಲಕ್ಷ ರು.ಗೆ ಹೆಚ್ಚಿಸಿದ್ದನ್ನು, ಒಬಿಸಿಯಲ್ಲೇ ಒಳಮೀಸಲಾತಿ ತರುವ ಪ್ರಸ್ತಾಪವನ್ನು- ಚುನಾವಣಾ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯವಾದ ಕುರುಬ ಸಮಾಜದವರಾಗಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ (ಅಹಿಂದ) ವರ್ಗವನ್ನು ಹೆಚ್ಚು ನೆಚ್ಚಿಕೊಂಡಿದೆ. ಹೀಗಾಗಿ ಅವರಿಗೇ ಈ ‘ಒಬಿಸಿ ಮಸೂದೆ’ಯ ಅಡ್ಡಗಾಲು ಹಾಕಲು ಕೇಸರಿ ಪಕ್ಷ ರಣನೀತಿ ರೂಪಿಸಿದೆ ಎಂದು ಮೂಲಗಳು ಹೇಳಿವೆ.
ಈಗಾಗಲೇ ಕರ್ನಾಟಕದಲ್ಲಿ ಇದೇ ವಿಷಯ ಮುಂದಿಟ್ಟುಕೊಂಡು ಪಕ್ಷದ ರಾಜ್ಯ ಉಸ್ತುವಾರಿ ಪ್ರಕಾಶ ಜಾವಡೇಕರ್, ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಇನ್ನಿತರ ಮುಖಂಡರು ಈಗಾಗಲೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.