
ಬೆಂಗಳೂರು(ಮೇ 12): ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಸಾಫ್ಟ್'ವೇರ್ ಉದ್ಯೋಗಿಯಾದ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಕೆಲವೇ ನಿಮಿಷದಲ್ಲಿ ಪೊಲೀಸರು ಬಂಧಿಸಿದ್ದಾರೆ. ನೊಂದ ಯುವತಿ "Know your police station" ಎಂಬ ಹೊಸ ಮೊಬೈಲ್ ಆ್ಯಪ್'ನಲ್ಲಿ ನೀಡಿದ ದೂರಿನ ಮೇರೆಗೆ ಪಿಂಕ್ ಹೊಯ್ಸಳ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ಬನಶಂಕರಿಯ ಮಧುಸೂದನ್ ರಾವ್ (47) ಬಂಧಿತ ಆರೋಪಿ. ಮೂಲತಃ ಆಂಧ್ರದ ಮಧುಸೂದನ್ ಸಹ ಸಾಫ್ಟ್'ವೇರ್ ಆಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇ 10ರ ರಾತ್ರಿ 11ಗಂಟೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್'ನಲ್ಲಿ ಇಬ್ಲೂರು ವರ್ತುಲ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ 29 ವರ್ಷದ ಯುವತಿ ಜತೆ ಅಸಭ್ಯವಾಗಿ ವರ್ತಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಸಹಪ್ರಯಾಣಿಕನ ಕಿರುಕುಳ ಹೆಚ್ಚಾದ್ದರಿಂದ ನೊಂದ ಯುವತಿ "Know your police station" ಆ್ಯಪ್ ಡೌನ್'ಲೋಡ್ ಮಾಡಿಕೊಂಡು ಪರಿಶೀಲನೆ ನಡೆಸಿದಾಗ ಬೆಳ್ಳಂದೂರು ಇನ್ಸ್'ಪೆಕ್ಟರ್ ನಂಬರ್ ಲಭ್ಯವಾಗಿದೆ. ತಕ್ಷಣ ಮೊಬೈಲ್'ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಪಿಂಕ್ ಹೊಯ್ಸಳ ಸಿಬ್ಬಂದಿ ಮುಖ್ಯಪೇದೆ ಮಹೇಶ್, ಮಹಿಳಾ ಪೇದೆ ಪವಿತ್ರಾ ಅವರು ಸಂತ್ರಸ್ತೆಯ ಮೊಬೈಲ್'ಗೆ ಕರೆ ಮಾಡಿ ವೋಲ್ವೋ ಬಸ್'ನ್ನು ಹಿಂಬಾಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಳ್ಳಂದೂರು ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ನಿನ್ನೆ ಗುರುವಾರ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ನಗರದ ಪೊಲೀಸ್ ಠಾಣೆಗಳ ಮಾಹಿತಿ ಒದಗಿಸುವ ಸಲುವಾಗಿ ಬೆಂಗಳೂರು ಪೊಲೀಸರು "Know your police station" ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಈ ಆ್ಯಪ್'ನಲ್ಲಿ ತಾವು ನಿಂತಿರುವ ಪ್ರದೇಶ ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದೆ. ಅಲ್ಲಿನ ಇನ್ಸ್'ಪೆಕ್ಟರ್ ಯಾರು, ಅವರ ಮೊಬೈಲ್ ನಂಬರ್ ಎಲ್ಲ ಮಾಹಿತಿ ಲಭ್ಯವಾಗಲಿದೆ.
ನಿಮ್ಮ ಆಂಡ್ರಾಯ್ಡ್ ಮೊಬೈಲ್'ನಲ್ಲಿ ಈ ಆ್ಯಪ್ ಡೌನ್'ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ. http://tinyurl.com/SurakshaAndroid
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.