
ಬೆಂಗಳೂರು(ನ.30): ಕೌನ್ಸಿಲ್ ಸಭೆಯಲ್ಲಿ ಮಹಿಳಾ ಸದಸ್ಯರು ಮಾತನಾಡಲು ಅವಕಾಶ ಸಿಗುವುದಿಲ್ಲ ಎಂಬ ಆರೋಪ ದೂರ ಮಾಡಲು ಇನ್ನುಮುಂದೆ ಪ್ರತಿ ಸಭೆಯಲ್ಲೂ ಮಹಿಳಾ ಸದಸ್ಯರಿಗಾಗಿ `ಪಿಂಕ್ ಅವರ್' ಎಂಬ ಪ್ರತ್ಯೇಕ ಸಮಯ ನಿಗದಿಪಡಿಸಲು ಮೇಯರ್ ಆರ್. ಸಂಪತ್ರಾಜ್ ನಿರ್ಧರಿಸಿದ್ದಾರೆ. ಸಭೆಯಲ್ಲಿ ಈ ಬಗ್ಗೆ ಘೋಷಿಸಿದ ಅವರು, ಮಹಿಳಾ ಸದಸ್ಯರಿಗೆ ಮಾತನಾಡಲು ಅವಕಾಶ ಸಿಗುವುದಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ. ಹಾಗಾಗಿ ಪ್ರತಿ ಕೌನ್ಸಿಲ್ ಸಭೆಯಲ್ಲಿ ಇನ್ನು ಮುಂದೆ 1 ಗಂಟೆ ಕಾಲ ಮಹಿಳಾ ಸದಸ್ಯರು ತಮ್ಮ ವಾರ್ಡ್ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯರ ಗೈರು: ಸದಸ್ಯರ ಕೊರತೆ ಹಿನ್ನೆಲೆಯಲ್ಲಿ ಬಿಬಿಎಂಪಿ ಕೌನ್ಸಿಲ್ ಸಭೆ ಎರಡೂವರೆ ತಾಸು ತಡವಾಗಿ ಆರಂಭಗೊಂಡಿತು. ಆದರೂ, ಅರ್ಧಕ್ಕಿಂತ ಹೆಚ್ಚು ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರಿಂದ ಖುರ್ಚಿಗಳು ಖಾಲಿಯಾಗಿದ್ದವು. ಬೆಳಗ್ಗೆ 10.30ಕ್ಕೆ ಸಭೆ ನಿಗದಿ ಮಾಡಲಾಗಿತ್ತು. ಆದರೆ ಪಾಲಿಕೆಯ ಬಿಜೆಪಿ ಸದಸ್ಯರು ಸಚಿವರಾದ ಕೆ. ಜೆ. ಜಾರ್ಜ್ ಹಾಗೂ ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಸಭೆಗೆ ನಿಗದಿತ ಸಮಯಕ್ಕೆ ಬರಲಿಲ್ಲ. ಆಡಳಿತ ಪಕ್ಷದ ಹಲವು ಸದಸ್ಯರೂ ಗೈರು ಹಾಜರಾಗಿದ್ದರು. ಹಾಗಾಗಿ ಸಭೆಯನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಗಿತ್ತು. ಆದರೆ ಸಭೆ ಆರಂಭಗೊಂಡಾದ ಮಧ್ಯಾಹ್ನ 1 ಗಂಟೆ. ಆಗಲೂ ಕೂಡ ಅರ್ಧದಷ್ಟು ಸದಸ್ಯರೂ ಹಾಜರಿರಲಿಲ್ಲ. 198 ಸದಸ್ಯರ ಪೈಕಿ 84 ಸದಸ್ಯರು ಮಾತ್ರ ಹಾಜರಿದ್ದರು. ಇವರಲ್ಲಿ ಮೇಯರ್ ಸೇರಿ ಕಾಂಗ್ರೆಸ್’ನ 27 ಸದಸ್ಯರು, ಉಪ ಮೇಯರ್ ಸೇರಿ ಜೆಡಿಎಸ್ 7 ಸದಸ್ಯರು ಮತ್ತು ಬಿಜೆಪಿಯ 50 ಸದಸ್ಯರು ಮಾತ್ರ ಹಾಜರಿದ್ದರು. ಸಂಜೆ ವೇಳೆಗೆ ಈ ಸಂಖ್ಯೆ ಇನ್ನಷ್ಟು ಇಳಿಕೆಯಾಯಿತು.
ಕಲ್ಯಾಣ ಕಾರ್ಯದ ಪ್ರಗತಿ ಪರಿಶೀಲನೆ: ಬಿಬಿಎಂಪಿ ಬಜೆಟ್’ನಲ್ಲಿ ಘೋಷಿಸಲಾಗಿರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಇನ್ನೊಂದು ವಾರದಲ್ಲಿ ಎಲ್ಲ ವಲಯಗಳಲ್ಲೂ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಹಾಗೂ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತಾಳಿದ ಅಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಬುಧವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸರ್ವ ಪಕ್ಷಗಳ ಸದಸ್ಯರು ಆರೋಪಿಸಿದರಲ್ಲದೇ ಈ ವಿಚಾರದಲ್ಲಿ ಆಯುಕ್ತರು ಉತ್ತರ ನೀಡುವುದಲ್ಲ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿರುವ ಅಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ ಆಯುಕ್ತರು ಮೌನ ಮುರಿಯಬೇಕಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.