ಮೋದಿಯಿಂದ ಎಚ್‌ಎಎಲ್‌ಗೆ ನಷ್ಟ, ಅಂಬಾನಿಗೆ ಲಾಭ

By Suvarna Web DeskFirst Published Nov 30, 2017, 12:49 PM IST
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಕೂಡಲೇ ಉದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ಅದಾನಿ ಒಡೆತನದ ಕಂಪನಿಗಳ ಜತೆಗೆ ಮಾಡಿ ಕೊಂಡಿರುವ ಒಪ್ಪಂದ ರದ್ದುಪಡಿಸಬೇಕು.: ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಕೂಡಲೇ ಉದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ಅದಾನಿ ಒಡೆತನದ ಕಂಪನಿಗಳ ಜತೆಗೆ ಮಾಡಿ ಕೊಂಡಿರುವ ಒಪ್ಪಂದ ರದ್ದುಪಡಿಸಬೇಕು. ಈ ಹಿಂದೆ ಎಚ್‌ಎಎಲ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆಯೇ ವಿಮಾನ ಖರೀದಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಣಾ ಇಲಾಖೆಗೆ 126 ವಿಮಾನ ಖರೀದಿ ಮಾಡಲು ಎಚ್‌ಎಎಲ್ ಜತೆಗೆ 2013ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಅನಿಲ್ ಅಂಬಾನಿ ಹಾಗೂ ಅದಾನಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಎಚ್‌ಎಎಲ್’ನೊಂದಿಗಿನ ಒಪ್ಪಂದ ರದ್ದು ಮಾಡಿದೆ. ವಿಮಾನ ತಂತ್ರಜ್ಞಾನದಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ ಅಂಬಾನಿ ಹಾಗೂ ಅದಾನಿಗೆ ಟೆಂಡರ್ ನೀಡಿ ಸಹಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ರಕ್ಷಣಾ ಕ್ಷೇತ್ರದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಎಚ್‌ಎಎಲ್ ಒಪ್ಪಂದ ರದ್ದುಪಡಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ತಂತ್ರಜ್ಞಾನ ಸಹಕಾರದ ಒಪ್ಪಂದ ಎಚ್’ಎಎಲ್ ಕೈತಪ್ಪಿದ್ದರಿಂದ ಅನೇಕ ಮಂದಿ ಉದ್ಯೋಗದಿಂದ ವಂಚಿತರಾಗಿದ್ದಾರೆ. ಇದೀಗ ಮೋದಿ ನೀಡಿರುವ ಟೆಂಡರ್‌ಗಾಗಿಯೇ ಅಂಬಾನಿ ಹಾಗೂ ಅದಾನಿ ಹೊಸದಾಗಿ ವಿಮಾನ ಉತ್ಪಾದನೆ ಕಂಪನಿ ಆರಂಭಿಸಿದ್ದಾರೆ ಎಂದು ದೂರಿದರು.

ಈ ಒಪ್ಪಂದದ ಬಗ್ಗೆ ಕಾನೂನು ವ್ಯಾಜ್ಯ ಹೊರತುಪಡಿಸಿ ಯಾವುದೇ ಅಂಶ ಬಹಿರಂಗಗೊಳಿಸುವ ಅವಶ್ಯಕತೆ ಇಲ್ಲ ಎಂದು ಷರತ್ತು ಕೂಡ ವಿಧಿಸಿಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಹಾಗೂ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಭ್ರಷ್ಟಾಚಾರ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ವಿಮಾನ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಯಡಿಯೂರಪ್ಪಗೆ ಬದ್ಧತೆ ಇದ್ದರೆ ಎಚ್‌ಎಎಲ್ ಒಪ್ಪಂದ ರದ್ದುಗೊಳಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರಲಿ ಎಂದು ಸವಾಲು ಹಾಕಿದರು.

ಅಂಬರೀಶ್‌ರನ್ನು ನಿರ್ಲಕ್ಷಿಸಿಲ್ಲ:

ಮಾಜಿ ಸಂಸದೆ ರಮ್ಯಾ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ ಅಂಬರೀಶ್ ನಮ್ಮ ಹಿರಿಯ ನಾಯಕರು. ಪಕ್ಷದ ಯಾವುದೇ ತೀರ್ಮಾನಗಳಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ. ಪಕ್ಷವು ಅಂಬರೀಶ್ ಅವರನ್ನು ನಿರ್ಲಕ್ಷಿಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!