ಎತ್ತಿನ ಹೊಳೆ ಯೋಜನೆಗೆ ಹಸಿರು ನ್ಯಾಯಾಧಿಕರಣ ಅಸ್ತು

Published : May 25, 2019, 10:54 AM IST
ಎತ್ತಿನ ಹೊಳೆ ಯೋಜನೆಗೆ ಹಸಿರು ನ್ಯಾಯಾಧಿಕರಣ ಅಸ್ತು

ಸಾರಾಂಶ

ಎತ್ತಿನ ಹೊಳೆ ಯೋಜನೆಗೆ ಅಸ್ತು ಎಂದ ಹಸಿರು ನ್ಯಾಯಾಧಿಕರಣ| ಯೋಜನೆಗೆ ಇದ್ದ ಅಡ್ಡಿ, ಆತಂಕ ನಿವಾರಣೆ| 2017ರಲ್ಲೇ ಷರತ್ತುಬದ್ಧ ಅನುಮತಿ ನೀಡಿದ್ದ ನ್ಯಾಯಾಧಿಕರಣ| ಆದರೆ ಆದೇಶ ಪೂರ್ಣ ಪ್ರಕಟಗೊಳ್ಳುವ ಮೊದಲೇ ಪೀಠದ ಸದಸ್ಯರೊಬ್ಬರು ನಿವೃತ್ತರಾಗಿದ್ದರು| ಹೀಗಾಗಿ ಪ್ರಕಟಗೊಂಡಿರಲಿಲ್ಲ ಆ ಆದೇಶ| ಹೊಸ ಆದೇಶದಿಂದ ಸಮ್ಮಿಶ್ರ ಸರ್ಕಾರ ನಿರಾಳ

ನವದೆಹಲಿ[ಮೇ.25]: ಎತ್ತಿನಹೊಳೆ ಯೋಜನೆಗೆ ನೀಡಲಾಗಿದ್ದ ಮೊದಲನೇ, ಎರಡನೇ ಹಂತದ ಅರಣ್ಯ ಅನುಮತಿ ಹಾಗೂ ಯೋಜನೆಯ ಕಾರ್ಯಾಸಾಧ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಶುಕ್ರವಾರ ವಜಾಗೊಳಿಸಿದೆ. ಈ ಮೂಲಕ ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಜಿಲ್ಲೆಗಳಿಗೆ ನೀರುಣಿಸುವ ರಾಜ್ಯ ಸರ್ಕಾರದ .13,000 ಕೋಟಿಗಳ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗೆ ಇದ್ದ ಒಂದು ಹಂತದ ಅಡ್ಡಿ, ಆತಂಕ ನಿವಾರಣೆಯಾದಂತಾಗಿದೆ.

ಯೋಜನೆಯ ಅನುಮತಿ ಪ್ರಕ್ರಿಯೆಗೆ ಎತ್ತಿದ್ದ ಎಲ್ಲ ಆಕ್ಷೇಪಗಳನ್ನು ನ್ಯಾಯಾಧಿಕರಣ ವಜಾಗೊಳಿಸುವ ಮೂಲಕ ಯೋಜನೆಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಆದರೆ ಯೋಜನೆಯ ಮೇಲೆ ನಿಗಾ ಇಡುವಂತೆ ಅರಣ್ಯ ಇಲಾಖೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚಿಸಿದ್ದು ನಿಯಮಗಳ ಉಲ್ಲಂಘನೆ ನಡೆದರೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಹಾಗೆಯೇ ಈ ಯೋಜನೆ ಪ್ರಗತಿಯಲ್ಲಿರುವಾಗ ಪಶ್ಚಿಮ ಘಟ್ಟದ ಮೇಲೆ ಯಾವ ರೀತಿಯ ಪರಿಣಾಮ ಆಗುತ್ತಿದೆ ಎಂಬುದರ ಅಧ್ಯಯನ ನಡೆಸುವುದಿದ್ದರೆ ನಡೆಸಬಹುದು ಎಂದು ನ್ಯಾಯಾಧಿಕರಣವು ಪರಿಸರ ಇಲಾಖೆಗೆ ಹೇಳಿದೆ.

ಕರ್ನಾಟಕ ನೀರಾವರಿ ನಿಗಮವು ಯೋಜನೆಗೆ ಸೂಕ್ತ ರೀತಿಯಲ್ಲಿ ಪರಿಸರ ಅನುಮತಿ ಪಡೆದಿಲ್ಲ ಎಂದು ವಕೀಲ ಕೆ.ಎನ್‌.ಸೋಮಶೇಖರ್‌ ಮತ್ತು ಪರಿಸರ ಪರಿಣಾಮ ಅಧ್ಯಯನ ನಡೆಸದೆ ಯೋಜನೆಗೆ ಅವಕಾಶ ನೀಡಬಾರದು ಹಾಗೂ ಯೋಜನೆಯ ಕಾರ್ಯಾಸಾಧ್ಯತೆಯನ್ನು ಪ್ರಶ್ನಿಸಿ ಕಿಶೋರ್‌ ಕುಮಾರ್‌ ಅವರು ಹಸಿರು ನ್ಯಾಯಾಧಿಕರಣದ ಮೊರೆ ಹೋಗಿದ್ದರು.

2017ರಲ್ಲೇ ಹಸಿರು ನ್ಯಾಯಾಧಿಕರಣವು ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿತ್ತು. ಆದರೆ ಈ ಆದೇಶವು ಪೂರ್ಣವಾಗಿ ಪ್ರಕಟಗೊಳ್ಳುವ ಮೊದಲೇ ನ್ಯಾಯಪೀಠದಲ್ಲಿನ ಸದಸ್ಯರೊಬ್ಬರು ನಿವೃತ್ತರಾಗಿದ್ದ ಹಿನ್ನೆಲೆಯಲ್ಲಿ ಆ ಅದೇಶ ಪ್ರಕಟಗೊಂಡಿರಲಿಲ್ಲ. ಬಳಿಕ ಪ್ರಕರಣದ ಮರು ವಿಚಾರಣೆ ನಡೆಸಿದ ಹಸಿರು ನ್ಯಾಯಾಧಿಕರಣದ ಮುಖ್ಯಸ್ಥ ನ್ಯಾ| ಆದರ್ಶ್ ಕುಮಾರ್‌ ಗೊಯೆಲ್ ನೇತೃತ್ವದ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.

ಎತ್ತಿನಹೊಳೆ ಯೋಜನೆಯು ಕುಡಿಯುವ ನೀರಿನ ಯೋಜನೆಯಾಗಿದ್ದು ಇದಕ್ಕೆ ಪರಿಸರ ಅನುಮತಿ ಪಡೆಯುವ ಅಗತ್ಯವಿಲ್ಲ. ಹಾಗೆಯೇ ಈ ಯೋಜನೆ ಯಾವುದೇ ಜೈವಿಕ ಉದ್ಯಾನ ಅಥವಾ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಪಶ್ಚಿಮಘಟ್ಟದ ತುಸು ಭಾಗವನ್ನು ಮಾತ್ರ ಕುಡಿಯುವ ನೀರಿನ ಯೋಜನೆಗೆ ಬಳಸಲಾಗಿದೆ ಎಂದು ನ್ಯಾಯಪೀಠವು ತನ್ನ 32 ಪುಟಗಳ ತೀರ್ಪಿನಲ್ಲಿ ಹೇಳಿದೆ.

ತೀರ್ಪನ್ನು ನ್ಯಾ.ಕೆ.ರಾಮಕೃಷ್ಣನ್‌ ಬರೆದಿದ್ದು ನ್ಯಾ. ಎಸ್‌.ಪಿ.ವಾಂಗ್ಡಿ, ತಜ್ಞ ಸದಸ್ಯ ಡಾ. ನಾಗಿನ್‌ ನಂದಾ ಅವರನ್ನು ಒಳಗೊಂಡಿದ್ದ ನ್ಯಾಯಪೀಠದ ನೇತೃತ್ವವನ್ನು ನ್ಯಾ.ಎ.ಕೆ. ಗೊಯೆಲ್ ವಹಿಸಿಕೊಂಡಿದ್ದರು. ಸರ್ಕಾರದ ಪರ ವಕೀಲ ಅಶೋಕ್‌ ದೇವರಾಜ್ ನೀರಾವರಿ ನಿಗಮದ ಪರ ಹಿರಿಯ ವಕೀಲ ನವೀನ್‌ ನಾಥ್‌, ದರ್ಪಣ… ಮತ್ತು ಸೋಮಶೇಖರ್‌ ಪರ ಋುತ್ವಿಕ ದತ್ತಾ, ಪ್ರಿನ್ಸ್‌ ಇಸಾಕ್‌ ವಾದಿಸಿದ್ದರು.

ರಾಷ್ಟ್ರೀಯ ಹಸಿರು ಪೀಠದಿಂದ ವ್ಯತಿರಿಕ್ತ ತೀರ್ಪು ಬಂದಿದೆ. ಅರಣ್ಯ ಇಲಾಖೆ ಮತ್ತು ಪರಿಸರ ಸಚಿವಾಲಯವು ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳಬೇಕು ಎಂದು ತೀರ್ಪಿನಲ್ಲಿ ತಿಳಿಸಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಪಶ್ಚಿಮಘಟ್ಟವನ್ನು ಉಳಿಸುವುದಕ್ಕಾಗಿ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದ್ದೇನೆ.

- ಕಿಶೋರ್‌ ಕುಮಾರ್‌, ಅರ್ಜಿದಾರರು, ಹಾಸನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು