ಬಿಜೆಪಿ ಶಾಸಕನ ಉಚ್ಛಾಟನೆಗೆ ಮೋದಿ ಸೂಚನೆ

By Web DeskFirst Published Jul 2, 2019, 1:33 PM IST
Highlights

ದುರ್ವರ್ತನೆ ತೋರಿದ ಬಿಜೆಪಿ ಶಾಸಕನ ಉಚ್ಛಾಟನೆಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಗೂಂಡಾಗಳಂತೆ ವರ್ತಿಸುವವರು ಪಕ್ಷದಲ್ಲಿ ಇರಲು ಅರ್ಹತೆ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನವದೆಹಲಿ [ಜು2] : ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರ ಮೇಲೆ ಬಿಜೆಪಿಯ ಹಿರಿಯ ನಾಯಕ ವಿಜಯ್‌ ವರ್ಗಿಯಾ ಅವರ ಪುತ್ರ, ಇಂದೋರ್‌ ಶಾಸಕರೂ ಆಗಿರುವ ಆಕಾಶ್‌ ವರ್ಗೀಯಾ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. 

ನವದೆಹಲಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ,  ಆತ ಯಾರ ಮಗನಾಗಲಿ ಕ್ರಮ ಜರುಗಿಸುವುದು ಅಗತ್ಯ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.  ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ. 

ಸಿಕ್ಸರ್‌ ಹೊಡೆದಂಗೆ ಅಧಿಕಾರಿಗಳ ಥಳಿಸಿದ ಶಾಸಕ!

ಇಂತಹವರನ್ನು ಪಕ್ಷದಿಂದ ಹೊರಹಾಕಬೇಕು. ಬಿಜೆಪಿಯಲ್ಲಿ ಇರಲು ಅರ್ಹತೆ ಇಲ್ಲ. ಇಂತಹ ವರ್ತನೆ ಖಂಡನೀಯ. ಓರ್ವ ರಾಜಕಾರಣಿಯ ಪುತ್ರನಾಗಿದ್ದಕ್ಕೆ ಈ ರೀತಿ ನಡೆದುಕೊಳ್ಳುವ ಅಧಿಕಾರ ಯಾರೂ ನೀಡಿಲ್ಲ ಎಂದು ಖಡಕ್ ಹೇಳಿಕೆ ನೀಡಿದ್ದಾರೆ. 

ಆಕಾಶ್ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, FIR ದಾಖಲು ಮಾಡಿ ನಾಲ್ಕು ದಿನ ಜೈಲಿನಲ್ಲಿ ಇರಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಆಕಾಶ್ ಬಿಡುಗಡೆ ಮಾಡಲಾಗಿತ್ತು.  ಜೈಲಿನಿಂದ ಬಿಡುಗಡೆ ಮಾಡಿದ ವೇಳೆ ಅವರ ಬೆಂಬಲಿಗರು ಹಾರ ತುರಾಯಿಗಳೊಂದಿಗೆ ಅವರನ್ನು ಸ್ವಾಗತಿಸಲಾಗಿತ್ತು.

click me!