ದುಷ್ಟಶಕ್ತಿಯ ಭಯಕ್ಕೆ ಇಡೀ ಗ್ರಾಮವೇ ಖಾಲಿ!

By Web DeskFirst Published Sep 26, 2018, 9:52 AM IST
Highlights

 150 ಮನೆಗಳಿರುವ ಗ್ರಾಮದಲ್ಲಿ 2 ತಿಂಗಳಿಂದ 19 ಜನ ಸಾವಿಗೀಡಾಗಿದ್ದಾರೆ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಇದೀಗ ಗ್ರಾಮವನ್ನೇ ಖಾಲಿ ಮಾಡಿ ತೆರಳಿದ್ದಾರೆ. 

ಹೊಸದುರ್ಗ: ದುಷ್ಟಶಕ್ತಿಗಳನ್ನು ಹೊರಹಾಕುವ ಸಲುವಾಗಿ ಇಡೀ ಗ್ರಾಮವೇ ಮನೆಗೆ ಬೀಗ ಹಾಕಿಕೊಂಡು ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಬೀಡು ಬಿಟ್ಟಿರುವ ಘಟನೆ ಹೊಸದುರ್ಗ ತಾಲೂಕಿನ ಗೊರವಿನಕಲ್ಲು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸುಮಾರು 150 ಮನೆಗಳಿರುವ ಗ್ರಾಮದಲ್ಲಿ 2 ತಿಂಗಳಿಂದ 19 ಜನ ಸಾವಿಗೀಡಾಗಿದ್ದಾರೆ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಗ್ರಾಮ ದೇವತೆ ಕುರುಬರಹಳ್ಳಿಯ ಕರಿಯಮ್ಮ ದೇವಿಯ ಮೊರೆ ಹೋಗಿದ್ದರು. ಗ್ರಾಮದಲ್ಲಿ ದುಷ್ಟಶಕ್ತಿಗಳು ಹೊಕ್ಕಿದ್ದು ಅವುಗಳನ್ನು 2 ತಿಂಗಳಿಂದ ನಿಯಂತ್ರಿಸುತ್ತಿದ್ದೇನೆ. ಅವುಗಳನ್ನು ಓಡಿಸಲು ಪೌರ್ಣಮಿಯ ದಿನ ಗ್ರಾಮದಲ್ಲಿ ಬಲಿ ಪೂಜೆ ಮಾಡಬೇಕಿದೆ. ಆ ಸಮಯದಲ್ಲಿ ಗ್ರಾಮದಲ್ಲಿ ಯಾರೂ ಇರಬಾರದು ಎಂಬ ಆಜ್ಞೆಯನ್ನು ದೇವಿ ನೀಡಿತ್ತು ಎಂಬುದ ಗ್ರಾಮಸ್ಥರ ಹೇಳಿಕೆ.

ಅದರಂತೆ ಗ್ರಾಮಸ್ಥರು ಪೌರ್ಣಮಿಯ ದಿನವಾದ ಮಂಗಳವಾರ ಬೆಳಗ್ಗೆ ಮನೆ ಮಂದಿಯೆಲ್ಲಾ ಸ್ನಾನ ಮಾಡಿಕೊಂಡು ದೇವರಿಗೆ ಹೋಳಿಗೆ ಎಡೆ ಮಾಡಿದ್ದಾರೆ. ಅದನ್ನು ಗ್ರಾಮದ ಅದಿ ದೇವತೆಯಾದ ಕಂಬದ ನರಸಿಂಹಸ್ವಾಮಿ ದೇವಾಲಯಕ್ಕೆ ಸಲ್ಲಿಸಿ ಎಳೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಗ್ರಾಮದಿಂದ ಹೊರ ಬಂದು ಉಪವಾಸ ವ್ರತ ಆಚರಣೆ ಮಾಡಿದ್ದಾರೆ. ಮಂಗಳವಾರ ರಾತ್ರಿ ವೇಳೆ ಮತ್ತೆ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ.

click me!