
ಇಸ್ಲಾಮಾಬಾದ್(ಸೆ.30): ಪಾಕಿಸ್ತಾನದ ಪೇಶಾವರ ಮಿಲಿಟರಿ ಶಾಲೆ ಮೇಲೆ ನಡೆದಿದ್ದ ಭೀಕರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಬೊಟ್ಟು ಮಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮ್ಮೂದ್ ಖುರೇಷಿ, ಪಾಕಿಸ್ತಾನದ ಪೇಶಾವರ ಮಿಲಿಟರಿ ಶಾಲೆ ಮೇಲೆ ನಡೆದಿದ್ದ ಭೀಕರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
2014ರಲ್ಲಿ ಪೇಶಾವರದ ಸೈನಿಕ ಶಾಲೆ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಖುರೇಷಿ ಗಂಭೀರ ಆರೋಪ ಮಾಡಿದರು. ಈ ಘಟನೆಯಲ್ಲಿ ಸುಮಾರು 150 ಮಕ್ಕಳು ದಾರುಣವಾಗಿ ಸಾವಿಗೀಡಾಗಿದ್ದರು. ಈ ಘಟನೆಯನ್ನು ಪಾಕ್ ಇಂದಿಗೂ ಮರೆತಿಲ್ಲ. ಈ ದಾಳಿಯಲ್ಲಿ ಭಾಗಿಯಾದ ಉಗ್ರರಿಗೆ ಭಾರತದಿಂದ ಬೆಂಬಲ ದೊರಕಿದೆ ಎಂದು ಖುರೇಷಿ ಆರೋಪಿಸಿದರು.
ಅಂತೆಯೇ ನ್ಯೂಯಾರ್ಕ್ನಲ್ಲಿ ನಡೆಯ ಬೇಕಿದ್ದ ವಿದೇಶಾಂಗ ಸಚಿವರ ಮಟ್ಟದ ಮಾತುಕತೆ ಮುರಿದುಬೀಳಲು ಭಾರತವೇ ಕಾರಣ ಎಂದು ಆರೋಪಿಸಿರುವ ಖುರೇಷಿ, ಭಾರತ ಶಾಂತಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದಾರೆ.
ಕಾಶ್ಮೀರ ವಿವಾದ ಬಗೆಹರಿಯುವವರೆಗೂ ದಕ್ಷಿಣ ಏಷ್ಯಾ ಭಾಗದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸದು. ಈ ಸಮಸ್ಯೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಆಧಾರದ ಮೇಲೆ ಹಾಗೂ ಕಾಶ್ಮೀರಿಗಳ ಇಷ್ಟದಂತೆ ಬಗೆಹರಿಯಬೇಕು ಎಂದು ಖುರೇಷಿ ಆಗ್ರಹಿಸಿದರು.
ಸಾರ್ವಭೌಮ ಸಮಾನತೆ ಮತ್ತು ಪರಸ್ಪರ ಗೌರವ ಆಧಾರದ ಮೇಲೆ ಇಸ್ಲಾಮಾಬಾದ್, ನವದೆಹಲಿಯೊಂದಿಗೆ ಸಂಬಂಧ ಬೆಳೆಸಬೇಕೆಂದುಕೊಂಡಿದೆ. ಗಂಭೀರ ಹಾಗೂ ಸಮಗ್ರವಾದ ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದನ್ನು ನಾವು ಎದರು ನೋಡುತ್ತಿದ್ದೇವೆ ಎಂದು ಖುರೇಷಿ ತಿಳಿಸಿದ್ದಾರೆ.
ಇನ್ನು ಪಾಕ್ ಆರೋಪಕ್ಕೆ ತಿರುಗೇಟು ನೀಡಿರುವ ಭಾರತ, ಪಾಕಿಸ್ತಾನ ವಿಶ್ವ ಸಮುದಾಯದ ಮುಂದೆ ಸುಳ್ಳನ್ನೇ ಹೇಳುವುದು ಎಂಬುದು ಮತ್ತೆ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದೆ.
ವಿಶ್ವಸಂಸ್ಥೆ ವೇದಿಕೆ: ಸುಷ್ಮಾ ರೌದ್ರಾವತಾರಕ್ಕೆ ‘ಪಡೋಸಿ’ ಗಡಗಡ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.