ಮತ್ತೊಬ್ಬ ಕುಲಭೂಷಣ್ ಜಾಧವ್ ಸೃಷ್ಟಿಗೆ ಪಾಕ್ ನಡೆಸಿದ್ದ ಯತ್ನ ವಿಫಲ| ಭಾರತದ ಅಮಾಯಕ ಎಂಜಿನಿಯರ್‌ನನ್ನು ಉಗ್ರ ಎಂದು ಸಾರಲು ಯತ್ನ| ವಿಶ್ವಸಂಸ್ಥೆಯಲ್ಲಿ ಮೋದಿಗೆ ಮುಖಭಂಗ ತರಲು ಚೀನಾ ನೆರವಿನಿಂದ ಪ್ರಯತ್ನ| ಎಂಜಿನಿಯರ್‌ನನ್ನು ರಕ್ಷಿಸಿ ತಾಯ್ನಾಡಿಗೆ ಕರೆತಂದ ಕೇಂದ್ರ ಸರ್ಕಾರ
ನವದೆಹಲಿ[ಸೆ.28]: ಇರಾನ್‌ನಲ್ಲಿ ಉದ್ಯಮ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್‌ರನ್ನು ಅಪಹರಿಸಿ, ಅವರನ್ನು ಬೇಹುಗಾರ ಎಂದು ದೂಷಿಸುತ್ತಿರುವ ಪಾಕಿಸ್ತಾನ, ಅಂತಹುದೇ ಮತ್ತೊಂದು ಪ್ರಯತ್ನ ನಡೆಸಲು ಹೋಗಿ ವಿಫಲವಾಗಿದೆ. ಆಷ್ಘಾನಿಸ್ತಾನದ ಪುನಾನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಭಾರತದ ಎಂಜಿನಿಯರ್ ವೇಣುಮಾಧವ್ ಡೋಂಗರಾ ಎಂಬುವರಿಗೆ ಉಗ್ರವಾದಿ ಪಟ್ಟಕಟ್ಟಿ, ಅವರನ್ನು ವಿಶ್ವಸಂಸ್ಥೆಯ ಮೂಲಕ ನಿಷೇಧಿಸಲು ಚೀನಾ ನೆರವಿನಿಂದ ಪ್ರಯತ್ನಿಸಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ, ಆಷ್ಘಾನಿಸ್ತಾನದಲ್ಲಿದ್ದ ವೇಣು ಅವರನ್ನು ಕೇಂದ್ರ ಸರ್ಕಾರ ದಿಢೀರ್ ಭಾರತಕ್ಕೆ ಕರೆತರುವಲ್ಲಿ ಸಫಲವಾಗಿದೆ.
ಭಾರತ ಏನಾದರೂ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೇ ಹೋಗಿದ್ದಿದ್ದರೆ, ಆಷ್ಘಾನಿಸ್ತಾನದಿಂದಲೇ ಆ ಎಂಜಿನಿಯರ್ ಅವರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅಪಹರಿಸುವ ಸಾಧ್ಯತೆ ಇತ್ತು. ವಿಶೇಷ ಎಂದರೆ, ಭಯೋತ್ಪಾದಕರಿಗೆ ನೆರವು ನೀಡಿದ ಆಪಾದನೆಯಡಿ ಆ ಎಂಜಿನಿಯರ್ ವಿರುದ್ಧ ಪಾಕಿಸ್ತಾನದಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.
undefined
ಏನಿದು ರಾದ್ಧಾಂತ?:
ಆರ್‌ಪಿಜಿ ಗ್ರೂಪ್‌ನ ಅಂಗಸಂಸ್ಥೆಯಾದ ಕೆಇಸಿ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯಲ್ಲಿ ವೇಣುಮಾಧವ್ ಡೋಂಗರಾ ಅವರು ಎಂಜಿನಿಯರ್ ಆಗಿದ್ದಾರೆ. ಆಷ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2015ರಲ್ಲಿ ಪೇಷಾವರ ವಾಯುನೆಲೆ ಮೇಲೆ ದಾಳಿ ನಡೆಸಿ 29 ಮಂದಿಯನ್ನು ಹತ್ಯೆಗೈದ ಉಗ್ರ ಸಂಘಟನೆ ಜತೆ ಡೋಂಗರಾ ನಂಟು ಹೊಂದಿದ್ದಾರೆ ಎಂದು ಬಿಂಬಿಸಲು ಪಾಕಿಸ್ತಾನ ಯತ್ನಿಸಿತ್ತು.
ಚೀನಾ ನೆರವಿನೊಂದಿಗೆ ಡೋಂಗರಾ ಅವರನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನೂ ಮಾಡಿತ್ತು. ಪಾಕಿಸ್ತಾನ ಎಂಬುದು ಉಗ್ರರ ದೇಶ, ಟೆರರಿಸ್ತಾನ ಎಂದೆಲ್ಲಾ ಜರಿಯುತ್ತಿರುವ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖಭಂಗ ಉಂಟು ಮಾಡುವ ಪ್ರಯತ್ನ ಇದಾಗಿತ್ತು. ಮಾಚ್‌ರ್‍ನಲ್ಲಿ ಆರಂಭವಾದ ಈ ತಂತ್ರಗಾರಿಕೆಯ ಇದೇ ತಿಂಗಳು ವಿಶ್ವಸಂಸ್ಥೆಯಲ್ಲಿ ಉಗ್ರ ಪಟ್ಟಕಟ್ಟುವುದರೊಂದಿಗೆ ಅಂತ್ಯ ಕಾಣಬೇಕಿತ್ತು.
ಪಾಕಿಸ್ತಾನದ ಈ ಪ್ರಯತ್ನ ಫಲಿಸಿದ್ದೇ ಆಗಿದ್ದರೆ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಿರುದ್ಧ ಹರಿಹಾಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಜುಗರ ತರುತ್ತಿತ್ತು. ಪಾಕಿಸ್ತಾನದ ಉದ್ದೇಶವೂ ಅದೇ ಆಗಿತ್ತು ಎನ್ನಲಾಗಿದೆ.
ಇದರ ಸುಳಿವರಿತ ಭಾರತ ದಿಢೀರನೇ ವೇಣುಮಾಧವ್ ಅವರನ್ನು ಸ್ವದೇಶಕ್ಕೆ ಕರೆಸಿಕೊಂಡಿದೆ. ಆದರೆ ಕೆಇಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ತಾಲಿಬಾನ್ ವಶದಲ್ಲಿದ್ದಾರೆ ಎಂದು ಹೇಳಲಾಗಿದೆ.