
ಬೆಂಗಳೂರು (ಸೆ. 28): ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಕ್ಕೆ ಬಂದ್ ಕರೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ಒಂಭತ್ತು ರಾಜಕೀಯ ಪಕ್ಷಗಳು ಮತ್ತು ಆರು ಕನ್ನಡ ಪರ ಸಂಘಟನೆಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮಹದಾಯಿ ನ್ಯಾಯಾಧಿಕರಣದ ತೀರ್ಪು ಖಂಡಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಕನ್ನಡ ಒಕ್ಕೂಟವು 2018ರ ಫೆ.4 ಮತ್ತು ಆಗಸ್ಟ್ 12ರಂದು ಕರೆ ನೀಡಿದ್ದ ಕರ್ನಾಟಕ ಬಂದ್ ವಿರೋಧಿಸಿ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘ, ಬೆಂಗಳೂರಿನ ನಿವಾಸಿ ನಾಗರಾಜ್ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ನಡೆಸಿದ ಬಂದ್ ವಿರುದ್ಧ ಕನಕಪುರ ತಾಲೂಕಿನ ರವಿ ಕುಮಾರ್ ಕಂಚನಹಳ್ಳಿ ಹೈಕೋರ್ಟ್‌ಗೆ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮೋದಿ ಬಳಿ ಮಾತ್ನಾಡಲು ಧೈರ್ಯ ಇಲ್ಲದಿದ್ದರೆ ನಾವು ಬರ್ತೇವೆ!
ಶುಕ್ರವಾರದ ವಿಚಾರಣೆ ವೇಳೆ ಅರ್ಜಿದಾರರೊಬ್ಬರ ಪರ ವಾದಿಸಿದ ವಕೀಲ ಎನ್.ಪಿ.ಅಮೃತೇಶ್, ರಾಜ್ಯದಲ್ಲಿ ಪದೇ ಪದೇ ಬಂದ್‌ಗೆ ಕರೆ ನೀಡಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ ಹಾಗೂ ಜನ ಜೀವನ ಅಸ್ತವ್ಯಸ್ತ ಮಾಡಿದ ಹಿನ್ನೆಲೆಯಲ್ಲಿ ಒಂಭತ್ತು ರಾಜಕೀಯ ಪಕ್ಷಗಳು ಮತ್ತು ಆರು ಕನ್ನಡ ಪರ ಸಂಘಟನೆಗಳನ್ನು ಅರ್ಜಿಯಲ್ಲಿ ಪ್ರತಿವಾದಿಯಾಗಿ ಸೇರ್ಪಡೆಗೊಳಿಸಲು ಕೋರಿ ಮೆಮೋ ಸಲ್ಲಿಸಿದರು.
ಆ ಮೆಮೋ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾಗಿ ಸೇರ್ಪಡೆಗೊಂಡ ರಾಜಕೀಯ ಪಕ್ಷಗಳು ಹಾಗೂ ಕನ್ನಡ ಪರ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿ, ನಾಲ್ಕು ವಾರದಲ್ಲಿ ಆಕ್ಷೇಪಣೆ ಸಲ್ಲಿಸಬೇಕೆಂದು ನಿರ್ದೇಶಿಸಿತು.
ನಾಳೆ ವಿಶ್ವ ವಿಖ್ಯಾತ ದಸರಾಗೆ ಸಾಹಿತಿ ಭೈರಪ್ಪ ಅಧಿಕೃತ ಚಾಲನೆ
ಅಲ್ಲದೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಕ್ರಮ ಖಂಡಿಸಿ ಸೆ.4ರಿಂದ ಸೆ.11ರವರೆಗೆ ರಾಮನಗರ ಜಿಲ್ಲೆಯ ವಿವಿಧೆಡೆ ನಡೆಸಿದ ಬಂದ್ ವೇಳೆ ಸಾರ್ವಜನಿಕ ಹಾಗೂ ಇತರರೆ ಆಸ್ತಿ ಹಾನಿ ಮಾಡಿದವರ ಹೆಸರು ಉಲ್ಲೇಖಿಸಿ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಗಿದೆ. ಅದನ್ನು ಆಧರಿಸಿ ಯಾವ ಕ್ರಮ ಕೈಗೊಳ್ಳಲಾಗಿದೆ? ತಪ್ಪಿತಸ್ಥರ ಪತ್ತೆಗೆ ಮತ್ತವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ರಾಜ್ಯ ಸರ್ಕಾರವು ನಾಲ್ಕು ವಾರದಲ್ಲಿ ವರದಿ ಸಲ್ಲಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ಬಂದ್ ನಡೆದ ವೇಳೆ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪದ್ಮಾವತ್ ಪ್ರಕರಣದಲ್ಲಿ ಸುಪ್ರೀಂಕೊರ್ಟ್ ನೀಡಿದ ನಿರ್ದೇಶನಗಳ ಪಾಲನೆ ಮಾಡಲಾಗಿದೆಯೇ ಎಂಬುದರ ಬಗ್ಗೆಯೂ ವರದಿ ಸಲ್ಲಿಸುವಂತೆ ಇದೇ ವೇಳೆ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.
ಯಾರ್ಯಾರಿಗೆ ನೋಟಿಸ್?
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್‌ಸಿ), ಭಾರತೀಯ ಜನತಾ ಪಕ್ಷ (ಬಿಜೆಪಿ), ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ), ಜಾತ್ಯತೀತ ಜನದಾದಳ (ಜೆಡಿಎಸ್), ಸಂಯುಕ್ತ ಜನತಾದಳ ( ಜೆಡಿಯು), ಆಮ್ ಆದ್ಮಿ ಪಕ್ಷ (ಎಎಪಿ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್-ಸಿಪಿಐಎಂ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣ ಗೌಡ), ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜನರಪರ ವೇದಿಕೆ, ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ, ಜಯ ಕರ್ನಾಟಕ ಮತ್ತು ಕನ್ನಡ ಸಮರ ಸೇನೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.