ಕಾಂಗ್ರೆಸ್'ನ ಪದ್ಮಾವತಿ ಬೆಂಗಳೂರಿನ 50ನೇ ಮೇಯರ್

By Internet DeskFirst Published Sep 28, 2016, 7:46 AM IST
Highlights

ಬೆಂಗಳೂರು(ಸೆ. 28): ಪ್ರಕಾಶ್ ನಗರ ವಾರ್ಡ್'ನ ಕಾಂಗ್ರೆಸ್ ಸದಸ್ಯೆ ಪದ್ಮಾವತಿಯವರು ಬಿಬಿಎಂಪಿಯ 50ನೇ ಮೇಯರ್ ಆಗಿ ಆಯ್ಕೆಯಾಗಿದರು. ಬಿಬಿಎಂಪಿ ಕಚೇರಿಯಲ್ಲಿ ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಪದ್ಮಾವತಿಯವರು 22 ಮತಗಳ ಅಂತರದಿಂದ ಗೆಲ್ಲುವ ಮೂಲಕ ಮೇಯರ್ ಆಗಿ ಆಯ್ಕೆಯಾಗಿದರು. ಕೈ ಮೇಲೆತ್ತುವ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ ಪದ್ಮಾವತಿಯವರು 142 ಮತಗಳನ್ನು ಪಡೆದರೆ, ಬಿಜೆಪಿಯ ಲಕ್ಷ್ಮೀ ಉಮೇಶ್ ಅವರು 120 ಮತಗಳನ್ನು ಪಡೆದಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಏಳು ಪಕ್ಷೇತರರು ಕೈಜೋಡಿಸಿದ್ದು ಪದ್ಮಾವತಿಯ ಮೇಯರ್ ಆಯ್ಕೆಯ ದಾರಿಯನ್ನು ಸುಗಮಗೊಳಿಸಿತು. ಮೇಯರ್ ಆಗಲು ಬೇಕಿದ್ದ ಮ್ಯಾಜಿಕ್ ನಂಬರನ್ನು ಪದ್ಮಾವತಿ ಸುಲಭವಾಗಿ ದಾಟಿದರು.

ಪದ್ಮಾವತಿಯವರು ಮೇಯರ್ ಆಗಿ ಆಯ್ಕೆಯಾಗಿರುವುದನ್ನು ಬಿಬಿಎಂಪಿ ಪ್ರಾದೇಶಿಕ ಆಯುಕ್ತೆ ಜಯಂತಿಯವರು ಅಧಿಕೃತವಾಗಿ ಘೋಷಿಸಿದರು. ಇನ್ನು, ಪದ್ಮಾವತಿಯವರು ಬೆಂಗಳೂರಿನ ಮೇಯರ್ ಆಗಿ ಒಂದು ವರ್ಷ ಕಾರ್ಯನಿರ್ವಹಿಸಲಿದ್ದಾರೆ. ಪದ್ಮಾವತಿಯವರ ಮೇಯರ್ ಅಧಿಕಾರಾವಧಿಯು 2016ರ ಸೆ.28ರಿಂದ 2017ರ ಸೆ.27ರವರೆಗೆ ಇರಲಿದೆ ಎಂದು ಜಯಂತಿಯವರು ತಿಳಿಸಿದರು.

ಪದ್ಮಾವತಿಗೆ ಬೆಂಬಲ ಕೊಟ್ಟವರು:
1) ಕಾಂಗ್ರೆಸ್: 112
2) ಜೆಡಿಎಸ್: 23
3) ಇತರರು: 7

ಇತ್ತ, ಬಿಜೆಪಿ ಕಾರ್ಪೊರೇಟರ್ ಲಕ್ಷ್ಮೀ ಉಮೇಶ್ ಅವರು ಚುನಾವಣೆಯಲ್ಲಿ ಗೆಲ್ಲುವ ಯಾವ ನಿರೀಕ್ಷೆಯೂ ಇರಲಿಲ್ಲ. ಬಿಜೆಪಿಯ ಎಲ್ಲಾ 122 ಮತಗಳು ದೊರಕುವ ನಿರೀಕ್ಷೆ ಇತ್ತು. ಆದರೆ, ಇಬ್ಬರು ಬಿಜೆಪಿ ನಗರಸಭಾ ಸದಸ್ಯರು ಚುನಾವಣೆಗೆ ತಡವಾಗಿ ಆಗಮಿಸಿದ್ದರಿಂದ ಅವರಿಗೆ ಮತದಾನದ ಅವಕಾಶ ನಿರಾಕರಿಸಲಾಯಿತು. ಇದನ್ನು ಆಕ್ಷೇಪಿಸಿ ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆದ ಘಟನೆ ಜರುಗಿತು. ಅಲ್ಲದೇ, ಉಪಮೇಯರ್ ಚುನಾವಣೆಯನ್ನ ಬಹಿಷ್ಕರಿಸಲೂ ಬಿಜೆಪಿ ನಿರ್ಧರಿಸಿದೆ.

click me!