ಪಾಕ್'ನಲ್ಲಿ ನಡೆಯುವ ಸಾರ್ಕ್ ಸಮ್ಮೇಳನ ರದ್ದು

By Internet DeskFirst Published Sep 28, 2016, 6:39 AM IST
Highlights

ನವದೆಹಲಿ(ಸೆ.28): ಪಾಕಿಸ್ತಾನದ ಇಸ್ಲಾಮಾಬಾದ್'ನಲ್ಲಿ ನವೆಂಬರ್'ನಲ್ಲಿ ನಡೆಯುವ 2016ನೇ ಸಾರ್ಕ್ ಶೃಂಗಸಭೆ ರದ್ದಾಗಿದೆ. ಸಾರ್ಕ್ ಶೃಂಗಸಭೆಯಲ್ಲಿ ಪ್ರಮುಖ ಸದಸ್ಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಭೂತಾನ್, ಅಪ್ಘಾನಿಸ್ತಾನ ರಾಷ್ಟ್ರಗಳು ಭಾಗವಹಿಸದಿರುವ ಕಾರಣ ಶೃಂಗಸಭೆಯನ್ನು ರದ್ದುಪಡಿಸಲಾಗಿದೆ ಎಂದು ಕಠ್ಮಂಡಿವಿನ ಹಿರಿಯ ರಾಯಭಾರಿ ಅಧಿಕಾರಿ ತಿಳಿಸಿದ್ದಾರೆ.

ಬಾಂಗ್ಲಾದೇಶವು ಸಾರ್ಕ್ ಸಭೆಗೆ ತಾನು ಗೈರಾಗಲು ಪಾಕಿಸ್ತಾನವನ್ನು ಪರೋಕ್ಷವಾಗಿ ದೂಷಿಸಿದೆ. ತನ್ನ ಆಂತರಿಕ ವಿಷಯದಲ್ಲಿ ಬೇರೊಂದು ರಾಷ್ಟ್ರದಿಂದ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು, ಇದರಿಂದ ವಾತಾವರಣ ಕಲುಷಿತವಾಗಿದೆ. ಹೀಗಾಗಿ ತಾನು ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಾಂಗ್ಲಾದೇಶ ದೂರಿದೆ. ಅಚ್ಚರಿ ಎಂದರೆ, ಸಾರ್ಕ್ ಒಕ್ಕೂಟಕ್ಕೆ ಮೊದಲು ಚಾಲನೆ ಕೊಟ್ಟಿದ್ದೇ ಬಾಂಗ್ಲಾದೇಶ. ಹೀಗಾಗಿ, ಬಾಂಗ್ಲಾದೇಶದ ಈ ನಿರ್ಧಾರ ನಿಜಕ್ಕೂ ಗಮನಾರ್ಹ. ದಕ್ಷಿಣ ಏಷ್ಯಾದ ಸೌಹಾರ್ದ ಹಾಗೂ ಶಾಂತ ವಾತಾವರಣವು ಪಾಕಿಸ್ತಾನದಿಂದ ಹದಗೆಡುತ್ತಿರುವುದಕ್ಕೆ ಬಾಂಗ್ಲಾದೇಶದ ಈ ನಿರ್ಧಾರ ಸಾಕ್ಷಿಯಾಗಿದೆ.

ಇನ್ನು, ಭೂತಾನ್ ಕೂಡ ತಾನು ಸಾರ್ಕ್ ಸಭೆಗೆ ಗೈರಾಗಲು ಭಯೋತ್ಪಾದನೆಯೇ ಕಾರಣ ಎಂದು ಹೇಳಿದೆ. ಪ್ರದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದ್ದು, ಸಾರ್ಕ್ ಸಭೆಗೆ ಪೂರಕವಾದ ವಾತಾವರಣವಿಲ್ಲದಿರುವುದರಿಂದ ತಾನು ಭಾಗವಹಿಸುತ್ತಿಲ್ಲ ಎಂದು ತಿಳಿಸಿದೆ. ಆಫ್ಘಾನಿಸ್ತಾನ ಕೂಡ ಇದೇ ಕಾರಣ ಕೊಟ್ಟು ಸಾರ್ಕ್ ಸಭೆಗೆ ಭಾಗಹಿಸಲು ಹಿಂದೇಟು ಹಾಕಿದೆ.

ಇನ್ನು, ಉರಿ ಸೆಕ್ಟರ್'ನ ಸೇನಾ ನೆಲೆಯ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಘಟನೆಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸುತ್ತಿರುವ ಭಾರತ ಇದೇ ವಿಚಾರವಾಗಿ ಸಾರ್ಕ್ ಸಮ್ಮೇಳನದಿಂದ ಹಿಂದೆ ಸರಿಯುವುದಾಗಿ ಹೇಳಿದೆ.

ಮೇ ನಾಲ್ಕು ರಾಷ್ಟ್ರಗಳನ್ನೊಳಗೊಂಡಂತೆ ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ನೇಪಾಳ ದೇಶಗಳು ಸಾರ್ಕ್ ಒಕ್ಕೂಟದಲ್ಲಿವೆ.

click me!