
ನವದೆಹಲಿ[ಆ.30]: ಸಿಬಿಐಗೆ ತಮ್ಮನ್ನು ಬಂಧಿಸದಂತೆ ಹೇಳಿ ಅಥವಾ ಸಿಬಿಐ ವಶದಿಂದ ತಮ್ಮನ್ನು ಬಿಡುಗಡೆ ಮಾಡಿಸಿ ಎಂದು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಕೆಯಾಗುವುದು ಸರ್ವೇ ಸಾಮಾನ್ಯ. ಆದರೆ ಸುಪ್ರೀಂಕೋರ್ಟ್‌ಗೆ ವಿಚಿತ್ರ ಅರ್ಜಿಯೊಂದು ಸಲ್ಲಿಕೆಯಾಗಿದೆ. ತಾವು ಸದ್ಯ ಸಿಬಿಐ ವಶದಲ್ಲಿದ್ದು, ಸೆ.2ರವರೆಗೂ ಅಲ್ಲೇ ಇರಲು ಅವಕಾಶ ಕೊಡಿ ಎಂದು ಕೋರಿಕೆ ಇಡಲಾಗಿದೆ. ಅಂದಹಾಗೆ, ಇದನ್ನು ಮಂಡಿಸಿರುವುದು ಸಿಬಿಐ ಬಂಧನದಲ್ಲಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ!
INX ಮೀಡಿಯಾ ಹಗರಣ: ಮಾಜಿ ಹಣಕಾಸು ಸಚಿವ ಚಿದುಗೆ ಸಂಕಷ್ಟ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಮ್ಮನ್ನು ಸಿಬಿಐ ವಶಕ್ಕೆ ನೀಡಿದ ವಿಚಾರಣಾ ನ್ಯಾಯಾಲಯ ಹಾಗೂ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ವಿರುದ್ಧ ಚಿದಂಬರಂ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯದ ಅರ್ಜಿಯ ಕುರಿತು ಸೆ.2ರಂದು ವಿಚಾರಣೆ ನಡೆಸಲಾಗುತ್ತದೆ. ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿರುವ ಅರ್ಜಿಯ ತೀರ್ಪನ್ನು ಸೆ.5ರಂದು ಪ್ರಕಟಿಸಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಹಾಗೂ ಎ.ಎಸ್. ಬೋಪಣ್ಣ ಅವರಿದ್ದ ಪೀಠ ಹೇಳಿತು. ಇದಾದ ಬೆನ್ನಿಗೇ ಚಿದಂಬರಂ ಪರ ವಕೀಲರು ಸೆ.2ರವರೆಗೂ ಸಿಬಿಐ ವಶದಲ್ಲೇ ಮುಂದುವರಿಯಲು ಅನುಮತಿ ಕೋರಿದರು. ನ್ಯಾಯಾಲಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಚಿದಂಬರಂ ಸಿಬಿಐ ವಶದ ಅವಧಿ ಶುಕ್ರವಾರ ಮುಗಿಯಲಿದೆ. ಹೀಗಾಗಿ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದೆ. ‘ಅವರು ಅಲ್ಲೇ ಕೋರಿಕೆ ಇಡಬಹುದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.