ಕಾಶ್ಮೀರ ಯಾವಾಗ ಪಾಕ್ ಭಾಗವಾಗಿತ್ತು?: ರಾಜನಾಥ್| ಪಾಕಿಸ್ತಾನವೇ ಭಾರತದ ಭಾಗವಾಗಿತ್ತು: ರಕ್ಷಣಾ ಸಚಿವ| ಪಾಕ್ ಆಕ್ರಮಿತ ಕಾಶ್ಮೀರವು ಪಾಕ್ ಅಕ್ರಮ ವಶದಲ್ಲಿದೆ
ಲೇಹ್[ಆ.30]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಅನಗತ್ಯವಾಗಿ ಪಾಕಿಸ್ತಾನ ಅಳುತ್ತಿದೆ. ಅದನ್ನು ನಿಲ್ಲಿಸಬೇಕು. ಜತೆಗೆ ಕಾಶ್ಮೀರ ಯಾವಾಗ ಪಾಕಿಸ್ತಾನದ ಭಾಗವಾಗಿತ್ತು ಎಂದು ಹೇಳಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸವಾಲು ಹಾಕಿದ್ದಾರೆ.
370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಲಡಾಖ್‌ಗೆ ಭೇಟಿ ನೀಡಿ, ಡಿಆರ್‌ಡಿಒ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಗುರುವಾರ ಮಾತನಾಡಿದ ಅವರು, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಹಕ್ಕು ಇಲ್ಲ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವುದನ್ನು ಆ ದೇಶ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
undefined
ಕಾಶ್ಮೀರ ಎಂದು ಅಳುತ್ತಿರುವ ಪಾಕಿಸ್ತಾನಕ್ಕೆ ನಾನೊಂದು ಕೇಳಬಯಸುತ್ತೇನೆ. ಕಾಶ್ಮೀರ ಯಾವಾಗ ಪಾಕಿಸ್ತಾನದ ಭಾಗವಾಗಿತ್ತು. ಪಾಕಿಸ್ತಾನವೇ ಭಾರತದ ಭಾಗವಾಗಿತ್ತು. ಸತ್ಯ ಏನೆಂದರೆ, ಗಿಲ್ಗಿಟ್-ಬಾಲ್ಟಿಸ್ತಾನ ಸೇರಿದಂತೆ ಇಡೀ ಪಾಕ್ ಆಕ್ರಮಿತ ಕಾಶ್ಮೀರ ಸದ್ಯ ಪಾಕಿಸ್ತಾನದ ಅಕ್ರಮ ವಶದಲ್ಲಿದೆ. ಇಡೀ ಆಕ್ರಮಿತ ಕಾಶ್ಮೀರ ಭಾರತದ ಭಾಗ ಎಂದು 1994ರಲ್ಲಿ ಸಂಸತ್ತಿನಲ್ಲಿ ನಿರ್ಣಯವೂ ಅಂಗೀಕಾರವಾಗಿದೆ ಎಂದು ಹೇಳಿದರು.
ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿ, ಅಸ್ತಿತ್ವದಲ್ಲಿರುವುದನ್ನು ಗೌರವಿಸುತ್ತೇವೆ. ಹಾಗಂತ ಬಾಯಿಗೆ ಬಂದಂತೆ ಮಾತನಾಡಬಹುದು, ಕಾಶ್ಮೀರದ ಬಗ್ಗೆ ಯೋಜಿತ ರೀತಿಯಲ್ಲಿ ಹೇಳಿಕೆ ನೀಡಬಹುದು ಎಂದರ್ಥವಲ್ಲ. ಯಾವುದೇ ದೇಶ ಇದಕ್ಕೆ ಅವಕಾಶ ನೀಡುವುದಿಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಯಾರಿಗೂ ಈ ಬಗ್ಗೆ ಸಂದೇಹವಿಲ್ಲ ಎಂದರು.