ಆಪರೇಷನ್ ಕಮಲ ಆಡಿಯೋ ಕ್ಲಿಪ್: ವಿಚಾರಣೆಯನ್ನು ಮುಂದೂಡಿದ ಹೈಕೋರ್ಟ್

By Web DeskFirst Published Jun 17, 2019, 6:53 PM IST
Highlights

ರಾಜ್ಯಾದ್ಯಂತ ಭಾರೀ ಕೋಲಾಹಲ ಸೃಷ್ಟಿಸಿದ್ದ ಆಪರೇಷನ್ ಕಮಲ ಪ್ರಕರಣದ ತನಿಖೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಕಲಬುರಗಿ, [ಜೂ.17]: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಆರೋಪ ಪ್ರಕರಣ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಕಲಬುರಗಿ ಹೈಕೋರ್ಟ್ ಜುಲೈ 01ಕ್ಕೆ ಮುಂದೂಡಿದೆ.

ಆಪರೇಷನ್ ಕಮಲ ಪ್ರಯತ್ನದ ಆಡಿಯೋ ಕ್ಲಿಪ್ ಪ್ರಕರಣದಲ್ಲಿ ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಈ ತಡೆಯಾಜ್ಞೆಯನ್ನು ರದ್ದುಗೊಳಿಸುವಂತೆ ಇಂದು [ಸೋಮವಾರ] ಗುರಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದರು.

ಯಡಿಯೂರಪ್ಪ ಅವರು ಚುನಾವಣಾ ಖರ್ಚಿಗಾಗಿ 10 ಕೋಟಿ ರೂಪಾಯಿ ನೀಡುವುದಾಗಿ ಶರಣಗೌಡಗೆ ಆಮಿಷ ಒಡ್ಡಿದ್ದಾರೆ. ಆದರೆ ವಿಧಾನಸಭೆ ಚುನಾವಣೆಗೆ 28 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಲು ಅವಕಾಶವಿದ್ದು, ಆಮಿಷ ಒಡ್ಡಿರುವುದು ಹತ್ತು ಕೋಟಿ ರೂಪಾಯಿ ಚುನಾವಣಾ ಖರ್ಚನ್ನು ಹೊರತುಪಡಿಸಿ ಉಳಿದದ್ದನ್ನು ಆಮಿಷವೆಂದು ಪರಿಗಣಿಸುವುದರ ಮೂಲಕ ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಿ ಪೊಲೀಸರ ತನಿಖೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.

ರವಿವರ್ಮ ಕುಮಾರ್ ಮಾಡಿರುವ ಸುಮಾರು ಒಂದು ಗಂಟೆ ಕಾಲ ವಾದವನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ್ ಅವರು ಜುಲೈ 01ಕ್ಕೆ ವಿಚಾರಣೆ ಮುಂದೂಡಿದರು.

click me!