
ನವದೆಹಲಿ(ನ.28): ನೋಟು ಅಮಾನ್ಯಗೊಂಡ ಬಳಿಕ, ದೇಶ ನೋಟಿನ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ನಡುವೆ, ದೇಶದಲ್ಲಿ ಇಲ್ಲಿವರೆಗೆ 1.5 ಲಕ್ಷ ಕೋಟಿ ಮೌಲ್ಯದ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿ ಬಂದಿವೆ. ಸಂಶೋಧನಾ ವರದಿಯೊಂದು ಈ ಮಾಹಿತಿ ಬಹಿರಂಗ ಪಡಿಸಿದೆ. ಅದರಲ್ಲೂ ದೊಡ್ಡ ಪ್ರಮಾಣದಲ್ಲಿ 2,000 ರೂ. ಮೌಲ್ಯದ ನೋಟುಗಳು ಚಲಾವಣೆಗೆ ಬಂದಿವೆ. ಹೊಸ ನೋಟುಗಳ ಜೊತೆಗೆ, 2.2 ಲಕ್ಷ ಕೋಟಿ ಮೊತ್ತದ ಇತರ ನೋಟುಗಳು (500 ಮತ್ತು 1000 ರೂ. ನೋಟುಗಳನ್ನು ಹೊರತುಪಡಿಸಿದ ನೋಟುಗಳು) ಈಗಾಗಲೇ ಚಲಾವಣೆಯಲ್ಲಿವೆ. ಹೀಗಾಗಿ ಹಿಂಪಡೆಯಲಾದ 500 ರೂ. ಮತ್ತು 1000 ರೂ. ಮೌಲ್ಯದ, 14.18 ಲಕ್ಷ ಕೋಟಿ ಮೊತ್ತದ ಸುಮಾರು 2203 ನೋಟುಗಳನ್ನು ಮರು ಪೂರೈಸಲು ಆರ್‌ಬಿಐಗೆ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ವರದಿ ತಿಳಿಸಿರುವುದಾಗಿ ‘ನ್ಯೂಸ್18’ ವರದಿ ಮಾಡಿದೆ.
14.18 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಲಾಗಿದ್ದು, ಬ್ಯಾಂಕ್‌ಗಳಲ್ಲಿ 6 ಲಕ್ಷ ಕೋಟಿ ಮೊತ್ತ ಜಮಾವಣೆಗೊಂಡಿದೆ ಎಂಬುದಾಗಿ ನ. 23ರಂದು ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಸಲ್ಲಿಸಿರುವ ವಿವರದಲ್ಲಿ ತಿಳಿಸಲಾಗಿದೆ.
ಕ್ರೆಡಿಟ್ ಸ್ಯೂಸ್ ವರದಿ ಪ್ರಕಾರ, ಆರ್‌ಬಿಐಗೆ ಪ್ರತಿ ದಿನಕ್ಕೆ 4ರಿಂದ 5 ಕೋಟಿ 500ರೂ.ರ ಹೊಸ ನೋಟುಗಳನ್ನು ಮಾತ್ರ ಮುದ್ರಿಸುವ ಸಾಮರ್ಥ್ಯವಿದೆ. ಕಳೆದ ವಾರಾಂತ್ಯದ ವೇಳೆ ಸುಮಾರು 20,000 ರೂ. ಕೋಟಿ ಮೌಲ್ಯದ 40,000 ಕೋಟಿ ನೋಟುಗಳನ್ನು ಮಾತ್ರ ಬ್ಯಾಂಕ್‌ಗಳಿಗೆ ಪೂರೈಸಲಾಗಿದೆ. ಎಟಿಎಂ ಹಾಗೂ ಬ್ಯಾಂಕ್‌ಗಳಲ್ಲಿ ನಗದು ವಿತ್‌ಡ್ರಾವಲ್ ಮಿತಿ ಸಡಿಲಗೊಳಿಸಿದಲ್ಲಿ, ನೋಟಿನ ಆವಶ್ಯಕತೆ ಇನ್ನೂ ಹೆಚ್ಚಾಗುತ್ತದೆ. ಜನವರಿ ವೇಳೆ ಪರಿಸ್ಥಿತಿ ಸಹಜವಾಗುತ್ತದೆ ಎಂದು ಹೇಳಲಾಗಿದೆ. ಆದರೆ ಅದು ಸಾಧ್ಯವಾಗಬೇಕಾದರೆ, ಶೇ. 150 ರ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದ ಶ್ರಮ ಹಾಕಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅದು ವಾಸ್ತವವಾಗಿ ಅಸಂಭವನೀಯ ಎಂದು ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.