ಅಗ್ಗದ ಬೆಲೆಗೆ ಮೈಸೂರು ಸಿಲ್ಕ್ ಸೀರೆ : ಒಂದು ಕುಟುಂಬಕ್ಕೆ ಎಷ್ಟು ಸೀರೆ..?

By Web DeskFirst Published Aug 1, 2018, 11:16 AM IST
Highlights

ಸರ್ಕಾರದಿಂದ ರಿಯಾಯ್ತಿ ದರದಲ್ಲಿ ನೀಡಲಾಗುವ ಮೈಸೂರು ಸಿಲ್ಕ್ ಸೀರೆಯನ್ನು ಒಂದು ಕುಟುಂಬಕ್ಕೆ ಒಂದೇ  ನೀಡಲಾಗುತ್ತದೆ ಎಂದು ಸಾರಾ ಮಹೇಶ್ ಹೇಳಿದ್ದಾರೆ. 

ಬೆಂಗಳೂರು: ವರ ಮಹಾಲಕ್ಷ್ಮೀ ಹಬ್ಬಕ್ಕೆ ಮಧ್ಯಮ ವರ್ಗದ ಮಹಿಳೆಯರಿಗೆ 4,500 ರು.ಗೆ ಮೈಸೂರು ರೇಷ್ಮೆ ಸೀರೆ ನೀಡಲು ಸೂಕ್ತ ಮಾನದಂಡ ರಚಿಸುತ್ತಿದ್ದು, ಕುಟುಂಬಕ್ಕೆ ಒಂದೇ ಸೀರೆ ನೀಡುವ ಪ್ರಸ್ತಾಪವಿದೆ ಎಂದು ರೇಷ್ಮೆ ಸಚಿವ ಸಾ.ರಾ. ಮಹೇಶ್ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಸಿಲ್ಕ್ ಸೀರೆ ದುಬಾರಿಯಾಗಿದ್ದು ಬಡ, ಮಧ್ಯಮ ವರ್ಗದವರ ಕೈಗೆಟುಕುವುದಿಲ್ಲ ಎಂಬ ಆರೋಪವಿತ್ತು.

ಹೀಗಾಗಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ 15ರಿಂದ 16  ಸಾವಿರ ರು. ಬೆಲೆ ಬಾಳುವ ರೇಷ್ಮೆ ಸೀರೆಯನ್ನು 4,500 ರು.ಗೆ ನೀಡುವುದಾಗಿ ಭರವಸೆ ನೀಡಿದ್ದೆ. ಇದು ಸ್ವಲ್ಪ ತಡವಾಗಿರುವುದರಿಂದ ಟೀಕೆ ಕೇಳಿ ಬರುತ್ತಿದ್ದು, ನಾವು ಸೀರೆ ಕೊಡಲು ಬದ್ಧವಾಗಿದ್ದೇವೆ. ಇದಕ್ಕೆ ಅಗತ್ಯ ಮಾನದಂಡ ರಚಿಸುತ್ತಿದ್ದೇವೆ ಎಂದರು. ಕುಟುಂಬಕ್ಕೆ ಒಂದೇ ಸೀರೆ ಕೊಡಬಹುದು ಎಂದು ಹೇಳಲಾಗುತ್ತಿದೆ. ಒಂದು ಕುಟುಂಬಕ್ಕೆ ಒಂದೇ ಸೀರೆ ನೀಡಿದರೆ ಕುಟುಂಬದಲ್ಲಿರುವ ಇತರೆ ಮಹಿಳೆಯರು ಅಸಮಾಧಾನಗೊಳ್ಳುತ್ತಾರೆ. 

ಆದರೂ, ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದರಿಂದ ನಮಗೆ 5- 6 ಕೋಟಿ ರು. ನಷ್ಟ ಉಂಟಾಗಲಿದೆ. ಇದನ್ನು ಎಂಎಸ್‌ಐಎಲ್ ಹಾಗೂ ಇಲಾಖೆ ತಲಾ ಶೇ. 50ರಷ್ಟು ಭರಿಸಲಿದೆ.  ಹೀಗಾಗಿ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ನೀಡುವುದು ಕಷ್ಟವಾಗುತ್ತದೆ. ಅಲ್ಲದೆ, ಹೆಚ್ಚು ಸೀರೆ ನೀಡಿದರೆ ದುರುಪಯೋಗ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಯಾವ ಕುಟುಂಬಗಳಿಗೆ ನೀಡಬೇಕು ಹಾಗೂ ಯಾವ ರೀತಿ ನೀಡಬೇಕು ಎಂಬ ಬಗ್ಗೆ ಮಾನದಂಡ ಮಾಡುತ್ತಿದ್ದೇವೆ. ಸದ್ಯದಲ್ಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು

click me!