
ಜೈಪುರ[ನ. 23]: ಪ್ರಧಾನಿ ಮೋದಿಯ ಜಾತಿ ಪ್ರಶ್ನಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಸಿ. ಪಿ. ಜೋಶಿಯ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿಯ ಬಳಿ ಕ್ಷಮೆ ಕೋರುವಂತೆ ಆದೇಶಿಸಿದ್ದಾರೆ. ಜೋಶಿ ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಲಿಸಿಕೊಂಡ ಬಂದಿರುವ ಆದರ್ಶಗಳ ವಿರುದ್ಧವಾಗಿದೆ ಎಂದು ರಾಹುಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ತಮ್ಮ ಹೇಳಿಕೆಯನ್ನು ಹಿಂಪಡದಿದ್ದು, ಕ್ಷಮೆ ಯಾಚಿಸಿದ್ದಾರೆ. ಈ ಹಿಂದೆ ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಭಾಷಣ ನೀಡಿದ್ದ ಸಿ. ಪಿ. ಜೋಶಿಯವರು ಮೋದಿ ಹಾಗೂ ಉಮಾಭಾರತಿಯವರ ಜಾತಿಯನ್ನು ಪ್ರಶ್ನಿಸಿದ್ದರು ಎಂಬುವುದು ಗಮನಾರ್ಹ.
ಈ ಕುರಿತಾಗಿ ಟ್ವೀಟ್ ಮಾಡಿರುವ ಡಾ. ಸಿ. ಪಿ. ಜೋಶಿ 'ಕಾಂಗ್ರೆಸ್ ಸಿದ್ಧಾಂತ ಹಾಗೂ ಕಾರ್ಯಕರ್ತರ ಭಾವನೆಗಳನ್ನು ಗೌರವಿಸುತ್ತಾ, ನನ್ನ ಹೇಳಿಕೆಯಿಂದ ಸಮಾಜದ ಯಾವುದೇ ವರ್ಗಕ್ಕೂ ನೋವುಂಟು ಮಾಡಿದ್ದರೆ ನಾನು ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.
ಹೇಳಿಕೆ ವಿರೋಧಿಸಿದ್ದ ರಾಹುಲ್ ಗಾಂಧಿ
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ "ಸಿ. ಪಿ ಜೋಶಿಯವರ ಹೇಳಿಕೆ ಕಾಂಗ್ರೆಸ್ ಆದರ್ಶಗಳ ವಿರುದ್ಧವಾಗಿದೆ. ಸಮಾಜದ ಒಂದು ವರ್ಗಕ್ಕೆ ನೋವಾಗುವಂತಹ ಯಾವುದೇ ಹೇಳಿಕೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ನೀಡಬೇಡಿ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕರ್ತರ ಭಾವನೆಗಳನ್ನು ಗೌರವಿಸುವ ಜೋಶಿಯವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು" ಎಂದಿದ್ದರು.
ಮೋದಿ ಹಾಗೂ ಉಮಾಭಾರತಿ ಜಾತಿಯನ್ನು ಪ್ರಶ್ನಿಸಿದ್ದ ಜೋಶಿ
ಸಾಮಾಜಿಕ ಜಾಲತಾಣ ಹಾಗೂ ಕೆಲ ಮಾಧ್ಯಮಗಳಲ್ಲಿ ಬಿತ್ತರಿಸಿದ ವಿಡಿಯೋ ಒಂದರಲ್ಲಿ ಸಿ. ಪಿ ಜೋಶಿ ಭಾಷಣ ಮಾಡುತ್ತಾ ಪ್ರಧಾನ ಮಂತ್ರಿ ಮೋದಿ ಹಾಗೂ ಉಮಾಭಾರತಿಯವರ ಜಾತಿಯನ್ನು ಪ್ರಶ್ನಿಸಿದ್ದರು. ಜೋಶಿಯವರು ರಾಜಸ್ಥಾನ ವಿಧಾನಸಭೆಯಲ್ಲಿ ತಾವು ಸ್ಪರ್ಧಿಸುತ್ತಿರುವ ನಾಥದ್ವಾರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ 'ಹಿಂದೂ ಧರ್ಮದ ಕುರಿತಾಗಿ ಕೇವಲ ಬ್ರಾಹ್ಮಣರಷ್ಟೇ ಮಾತನಾಡಬಹುದು' ಎನ್ನುವ ಮೂಲಕ ವಿವಾದಕ್ಕೀಡಾಗಿದ್ದರು.
ವಿವಾದ ಹೆಚ್ಚಾಗುತ್ತಿದ್ದಂತೆಯೇ ಡಾ. ಸಿ. ಪಿ ಜೋಶಿ ’ಬಿಜೆಪಿ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ್ದಾರೆ. ನಾನಿದನ್ನು ಖಂಡಿಸುತ್ತೇನೆ' ಎನ್ನುವ ಮೂಲಕ ಕಮಲ ಪಕ್ಷದ ಮೆಲೆ ಆರೋಪ ಹೊರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ