ಕಾಶ್ಮೀರದಲ್ಲಿ ಮಧ್ಯರಾತ್ರಿ ನಿಷೇಧಾಜ್ಞೆ, ಇಂಟರ್ನೆಟ್ ಸ್ಥಗಿತ, ಒಮರ್, ಮುಫ್ತಿಗೆ ದಿಗ್ಭಂಧನ!

By Web Desk  |  First Published Aug 5, 2019, 7:47 AM IST

ಆಪರೇಷನ್ ಕಾಶ್ಮೀರ ರಹಸ್ಯ ಇಂದು ಬಯಲು?| ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ | ನಿನ್ನೆ ಮಧ್ಯರಾತ್ರಿ ಹೈಡ್ರಾಮಾ ನಿಷೇಧಾಜ್ಞೆ, ಇಂಟರ್ನೆಟ್ ಬಂದ್ | ಒಮರ್, ಮುಫ್ತಿಗೆ ದಿಗ್ಭಂಧನ|  ಶಾಲೆಗಳಿಗೆ ರಜೆ


ನವದೆಹಲಿ[ಆ.05]: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಏಕಾಏಕಿ 38 ಸಾವಿರ ಯೋಧ ರನ್ನು ನಿಯೋಜನೆ ಮಾಡಿರುವುದರ ಕುರಿತು ನಾನಾ ವಿಶ್ಲೇಷಣೆಗಳು ಕೇಳಿಬರುತ್ತಿರುವ ನಡುವೆಯೇ, ಭಾನುವಾರ ತಡರಾತ್ರಿ ಕಣಿವೆ ರಾಜ್ಯದಲ್ಲಿ ಹೈಡ್ರಾಮಾ ನಡೆದಿದೆ. ರಾತ್ರೋ ರಾತ್ರಿ ರಾಜಧಾನಿ ಶ್ರಿನಗರ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮೊಬೈಲ್ ಇಂಟರ್ನೆಟ್ ಅನ್ನು ನಿಷೇಧಿಸಲಾಗಿದೆ. ಒಮರ್ ಅಬ್ದುಲ್ಲಾ, ಮುಫ್ತಿ ಮೆಹಬೂಬಾ ಸೇರಿದಂತೆ ಹಲವು ನಾಯಕರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ 9.30ಕ್ಕೆ ಮಹತ್ವದ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಕಾಶ್ಮೀರದಲ್ಲಿನ ನಿಗೂಢ ಬೆಳವಣಿಗೆಗಳ ಬಗ್ಗೆ ಈ ಸಭೆಯಿಂದ ಉತ್ತರ ದೊರಕಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

Tap to resize

Latest Videos

ಸಭೆಗೆ ಪೂರ್ವಭಾವಿಯಾಗಿ ಭಾನುವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಭದ್ರತಾಧಿಕಾರಿಗಳ ಸಭೆ ನಡೆಸಿದ್ದಾರೆ. ಒಂದು ತಾಸು ನಡೆದ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದ ಈ ಸಭೆಯಲ್ಲಿ ಜಮ್ಮು-ಕಾಶ್ಮೀರದಲ್ಲಿನ ಸದ್ಯದ ಪರಿಸ್ಥಿತಿಗಳ ಕುರಿತು ತೀವ್ರ ರೀತಿಯ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ೩೮ ಸಾವಿರ ಯೋಧರ ನಿಯೋಜನೆ ಬಳಿಕ ಹಲವು ರೀತಿಯ ವದಂತಿ ಹಬ್ಬಿವೆ. ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಬಹುದು, ಸ್ಥಿರಾಸ್ತಿ ಖರೀದಿ ಹಕ್ಕನ್ನು ದೇಶದ ಉಳಿದ ಭಾಗದ ಜನರಿಗೂ ನೀಡಲು ೩೫ಎ ಕೈಬಿಡಬಹುದು, ಈ ಬಾರಿ ಕಾಶ್ಮೀರದಲ್ಲೇ ಮೋದಿ ಧ್ವಜಾರೋಹಣ ಮಾಡಬಹುದು, ಉಗ್ರರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಆಪರೇಷನ್ ಆರಂಭವಾಗಬಹುದು ಎಂಬೆಲ್ಲಾ ವಾದಗಳು ಕೇಳಿಬಂದಿವೆ.

ಕಾಶ್ಮೀರದಲ್ಲಿ ಅಲ್ಲೋಲ ಕಲ್ಲೋಲ; ಮೋದಿ ಶಾ ತಂತ್ರವೇನು?

ಸಂಸತ್ ಅಧಿವೇಶನ ಬಳಿಕ ಶಾ ಕಾಶ್ಮೀರಕ್ಕೆ

ಕಾಶ್ಮೀರದಲ್ಲಿ ಬೆಳವಣಿಗೆಗಳು ದೇಶಾದ್ಯಂತ ಭಾರೀ ಕುತೂಹಲ ಹುಟ್ಟುಹಾಕಿರುವ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ 3 ದಿನಗಳ ಜಮ್ಮು ಮತ್ತು ಕಾಶ್ಮೀರ ಭೇಟಿ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಆ.7ಕ್ಕೆ ಸಂಸತ್ ಅಧಿವೇಶ ಮುಗಿಯಲಿದ್ದು, ಬಳಿಕ ಅವರು ಕಾಶ್ಮೀರಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಭೇಟಿ ವೇಳೆ ಕಾಶ್ಮೀರದ ಪ್ರಸಕ್ತ ಸನ್ನಿವೇಶವನ್ನು ಅವಲೋಕನ ಮಾಡುವುದರ ಜತೆಗೆ, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ರೂಪುರೇಶೆಗಳನ್ನು ತಯಾರು ಮಾಡಲು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಅಮರನಾಥ ಯಾತ್ರೆಗೆ ಉಗ್ರರ ಬೆದರಿಕೆ ಇರುವುದರಿಂದ, ಆದಷ್ಟು ಬೇಗ ಯಾತ್ರಿಗಳು ಹಾಗೂ ಪ್ರವಾಸಿಗಳು ಕಣಿವೆ ಬಿಟ್ಟು ಮರಳಬೇಕು ಎಂದು ಜಮ್ಮು ಕಾಶ್ಮೀರ ಸರ್ಕಾರ ಹೇಳಿದ ಕೆಲವೇ ದಿನಗಳಲ್ಲಿ ಶಾ ಕಾಶ್ಮೀರ ಭೇಟಿ ವಿಚಾರ ಹೊರ ಬಿದ್ದಿದ್ದು ಭಾರೀ ಕುತೂಹಲ ಕೆರಳಿಸಿದೆ.

ಹೋರಾಟಕ್ಕೆ ಸರ್ವಪಕ್ಷ ನಿರ್ಧಾರ

ಸಾಂವಿಧಾನಿಕವಾಗಿ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಕಸಿದುಕೊಳ್ಳುವ ಹಾಗೂ ರಾಜ್ಯವನ್ನು ಮೂರು ಭಾಗವಾಗಿ ವಿಂಗಡಿಸುವ ಯಾವುದೇ ಯತ್ನದ ವಿರುದ್ಧ ಪಕ್ಷಭೇದ ಮರೆತು ಹೋರಾಡುವ ಬಗ್ಗೆ ಜಮ್ಮು- ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಭಾನುವಾರ ದೃಢಸಂಕಲ್ಪ ಕೈಗೊಂಡಿವೆ.

ಶ್ರೀನಗರದಲ್ಲಿ ನಿಷೇಧಾಜ್ಞೆ ಜಾರಿ

ಕಾಶ್ಮೀರ ಸಂಬಂಧ ಕೇಂದ್ರ ಸರ್ಕಾರ, ಸೋಮವಾರ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂಬ ವರದಿಗಳ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಹಲವು ಭಾಗಗಳಲ್ಲಿ ಭಾನುವಾರ ತಡರಾತ್ರಿ ನಿಷೇಧಾಜ್ಞೆ ಹೇರಲಾಗಿದೆ.

ಮುಫ್ತಿ, ಒಮರ್‌ಗೆ ಗೃಹ ಬಂಧನ

ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಕಾಂಗ್ರೆಸ್‌ನ ಹಲವು ನಾಯಕರನ್ನು ಭಾನುವಾರ ರಾತ್ರಿ ಗೃಹ ಬಂಧನಕ್ಕೆ ಒಳಪಡಿಸಲಾಗಿದೆ. ಇತರೆ ಹಲವು ರಾಜಕೀಯ ನಾಯಕರನ್ನೂ ಗೃಹ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ.

ಮೊಬೈಲ್ ಇಂಟರ್ನೆಟ್ ಬಂದ್

ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾನುವಾರ ರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಯಾವುದೇ ವದಂತಿ ಹಬ್ಬದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಹಿರಿಯ ಅಧಿಕಾರಿಗಳಿಗೆ ಸ್ಯಾಟಲೈಟ್ ಫೋನ್‌ಗಳನ್ನು ನೀಡಲಾಗಿದೆ. ಜೊತೆಗೆ ಸಾರ್ವಜನಿಕ ಸಮಾರಂಭಗಳ ಮೇಲೆ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಮಧ್ಯರಾತ್ರಿ ಸಭೆ ನಡೆಸಿದ ರಾಜ್ಯಪಾಲ

ಜಮ್ಮು- ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿಯಾದ ಬೆನ್ನಲ್ಲೇ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭಾನುವಾರ ಮಧ್ಯರಾತ್ರಿ ಭದ್ರತಾ ಕಾರ್ಯದರ್ಶಿ, ಡಿಜಿಪಿ ಹಾಗೂ ಐಜಿಪಿಗಳ ಸಭೆ ಕರೆದು ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಪಾಕ್ ಮೇಲೆ ದಾಳಿಗೆ ಬೋಫೋರ್ಸ್‌

ಜುಲೈ 31 ಮತ್ತು ಆ.1ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದ ಭಾರತೀಯ ಸೇನೆ, ಇದಕ್ಕಾಗಿ ಬೋಫೋರ್ಸ್‌ ಫಿರಂಗಿಗಳನ್ನು ಬಳಸಿಕೊಂಡಿತ್ತು ಎನ್ನಲಾಗಿದೆ.

click me!