
ಚಿತ್ರದುರ್ಗ(ನ.22): ಆರ್ಯವೈಶ್ಯ ಜನಾಂಗ ಕೇವಲ ಸಾಂಪ್ರದಾಯಿಕ ವ್ಯಾಪಾರವನ್ನು ನಂಬಿ ಕೂರುವ ಕಾಲ ಈಗಿಲ್ಲ. ವಿದ್ಯಾರಂಗದಲ್ಲಿ ಈ ಸಮುದಾಯ ಮುಂದೆ ಬರುತ್ತಿದ್ದು ವ್ಯಾಪಾರ ವೃತ್ತಿಗೆ ಶರಣು ಹೊಡೆದು ಹೊಸ ಹೊಸ ವೃತ್ತಿಗಳತ್ತ ಮುಖ ಮಾಡಿದ್ದಾರೆ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್. ಎನ್. ಕಾಶಿವಿಶ್ವನಾಥ ಶೆಟ್ಟಿ ಹೇಳಿದರು.
ವಾಸವಿ ಮಹಲಿನಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಯುವ ಪರಿಷತ್, ಆರ್ಯ ವೈಶ್ಯ ಸಂಘ ಮತ್ತು ವಾಸವಿ ಯುವಜನ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಆರ್ಯವೈಶ್ಯ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಅನೇಕರಿಗೆ ಉದ್ಯೋಗಗಳನ್ನು ನೀಡುತ್ತಿದ್ದ ವೈಶ್ಯ ಸಮಾಜದ ಯುವಕರು ಈಗ ಉದ್ಯೋಗಗಳನ್ನು ಹುಡುಕುವ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು.
ಪ್ರಥಮ ಬಾರಿಗೆ ನಡೆಯುತ್ತಿರುವ ಅರ್ಯವೈಶ್ಯ ಉದ್ಯೋಗ ಮೇಳದ ಆಯೋಜನೆಗೆ ಚಿತ್ರದುರ್ಗ ನಗರವನ್ನು ಆಯ್ಕೆ ಮಾಡಿಕೊಂಡಿರುವುದು ತುಂಬಾ ಸಮಂಜಸವಾಗಿದೆ. ಈ ನಗರದಿಂದ ಆರಂಭವಾದ ಆರ್ಯವೈಶ್ಯ ಸಮಾಜದ ಕಾರ್ಯಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿವೆ. ಇದಕ್ಕೆ ಪ್ರತಿಭಾ ಪುರಸ್ಕಾರ, ಆರ್ಯವೈಶ್ಯ ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿಯಾಗಿವೆ ಎಂದು ನುಡಿದರು.
ಆರ್ಯವೈಶ್ಯ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಲ್. ಸುರೇಶ ರಾಜು ಮಾತನಾಡಿ, ಅಪ್ಪ ಹಾಕಿದ ಆಲದ ಮರದಂತೆ ಇದ್ದ ಅಂಗಡಿ ಮುಂಗಟ್ಟುಗಳು ಜಾಗತೀಕರಣದ ಭರಾಟೆಯಲ್ಲಿ ಅರ್ಧಕ್ಕರ್ಧ ಮುಚ್ಚಿ ಹೋಗಿದ್ದು ಜನಾಂಗದ ಯುವಕರಿಗೆ ಉದ್ಯೋಗ ಬೇಕೇ ಬೇಕಾಗಿರುವ ಪ್ರಸ್ತುತ ಸಂದರ್ಭದಲ್ಲಿ ಈ ಉದ್ಯೋಗ ಮೇಳ ನಡೆಯುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.
ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಕುಮಾರ್ ಮಾತನಾಡಿ, ಅನಾದಿ ಕಾಲದಿಂದ ವ್ಯಾಪಾರ ನಿರ್ವಹಿಸುತ್ತಿರುವ ಆರ್ಯವೈಶ್ಯ ಜನಾಂಗಕ್ಕೆ ಈಗ ಉದ್ಯೋಗ ಹುಡುಕುವ ಅನಿವಾರ್ಯತೆ ಒದಗಿದೆ. ಸಾಂಪ್ರದಾಯಿಕ ವ್ಯಾಪಾರಿ ರಂಗ ಕಳಾಹೀನವಾಗಿದ್ದು ಜೀವನೋಪಾಯಕ್ಕೆ ಬೇರೆ ಮಾರ್ಗಗಳನ್ನು ಹುಡುಕುತ್ತಿರುವ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ ಎಂದು ತಿಳಿಸಿದರು.
ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯ ಎನ್ ಪದ್ಮನಾಭ್, ಮುಂದಿನ ವರ್ಷದ ಜನವರಿಯಿಂದ ಆರ್ಯವೈಶ್ಯ ಮಹಾಸಭಾದ ಶತಮಾನೋತ್ಸವ ಭವನದಲ್ಲಿ ಕಾಯಂ ಆದ ಒಂದು ಮಾನವ ಸಂಪನ್ಮೂಲ ಸಲಹಾ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಿರುವುದು ಜನಾಂಗದ ಯುವಕರಿಗೆ ವರದಾನವಾಗಲಿದೆ ಎಂದು ಹೇಳಿದರು.
ಮಹಾಸಭಾದ ಜಿಲ್ಲಾ ಅಧ್ಯಕ್ಷ ಕೆ.ವಿ ಅಮರೇಶ್ ಮಾತನಾಡಿ, ಸರಕಾರದಿಂದ ಯಾವುದೇ ಸವಲತ್ತು ಸಿಗದ ಆರ್ಯವೈಶ್ಯ ಸಮಾಜದ ಯುವಕರಿಗೆ ಇಂತಹ ಉದ್ಯೋಗ ಮೇಳದಿಂದ ತುಂಬಾ ಪ್ರಯೋಜನವಾಗುತ್ತದೆ ಎಂದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಪಿ.ಡಿ ಪುಟ್ಟರಾಜು, ಯುವಸಾಹಸಿ ಪರ್ವತಾರೋಹಿ ಜೋತಿರಾಜ್ (ಕೋತಿರಾಜ್) ಅವರನ್ನು ಸನ್ಮಾನಿಸಲಾಯಿತು. ಎಚ್.ಎಂ. ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಎಂ.ವಿ. ಅಜಯಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ವಾಸವಿ ಯುವಜನ ಸಂಘದ ಅಧ್ಯಕ್ಷ ಅವಿನಾಶ್ ಸ್ವಾಗತಿಸಿದರು.
ಮೇಳದಲ್ಲಿ ಶ್ರೀನಿವಾಸ್ ಟ್ರಾವೆಲ್ ಏಜೆನ್ಸಿ (ಉದ್ಯೋಗ ಸಲಹೆಗಾರ), ವಾಲ್‌ನಟ್ ಸ್ಟೋರ್ಸ್, ರಾಜರಾಜೇಶ್ವರಿ ಆ್ಯಂಡ್ ಕಂಪನಿ, ಎಸ್‌ಬಿಐ ಕಾರ್ಡ್ಸ್ ಆ್ಯಂಡ್ ಪ್ರೈ ಲಿಮಿಟೆಡ್ ಕಂಪನಿಗಳು ಭಾಗವಹಿಸಿದ್ದವು. ಐದು ನೂರು ಜನರು ನೊಂದಾಯಿಸಿಕೊಂಡಿದ್ದು 260 ಜನ ಸಂದರ್ಶನಕ್ಕೆ ಹಾಜರಾಗಿದ್ದರು. ಅವರ ಪೈಕಿ 206 ಜನರಿಗೆ ದೇಶ ವಿದೇಶಗಳಲ್ಲಿ ಉದ್ಯೋಗ ಒದಗಿಸುವ ಭರವಸೆ ದೊರೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.