
ಶಿವಮೊಗ್ಗ(ನ.22): ಶಿವಮೊಗ್ಗಕ್ಕೂ ಕಾರ್ ರೇಸ್'ಗೂ ಇರುವ ಏಕೈಕ ಸಂಬಂಧ ಡಿ.ಸಿ. ಅವಿನಾಶ್. ಗುರುವಿಲ್ಲದೆ ಕಾರ್ ರೇಸ್ ಚಾಲಕನಾಗಿ ಸಾಧನೆಯ ಮೆಟ್ಟಿಲೇರಿರುವ ಈ ಮಲೆನಾಡಿನ ಪ್ರತಿಭೆ ಇಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದರೆ ಪ್ರಾಯೋಜಕರ ಕೊರತೆ ಇದೆ. ಲಕ್ಷಗಟ್ಟಲೆ ಹಣ ಬೇಡುವ ಈ ಕ್ರೀಡೆಯಲ್ಲಿ ನಿರಂತರ ಆಸಕ್ತಿ ಹೊಂದಿರುವ ಇವರು ಇದೇ ನ. 24 ರಿಂದ 26 ರವರೆಗೆ ಚಿಕ್ಕಮಗಳೂರಿನ ಮೂಡಿಗೆರೆ ಯಲ್ಲಿ ನಡೆಯಲಿರುವ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್'ನಲ್ಲಿ ಭಾಗವಹಿಸುತ್ತಿದ್ದಾರೆ. ಈ ರ್ಯಾಲಿಗಾಗಿ ಸುಮಾರು 4 ತಿಂಗಳಿಂದ ತರಬೇತಿ ಪಡೆದಿರುವ ಇವರಿಗೆ ಈ ಕ್ರೀಡೆಯ ಬಗ್ಗೆ ಆಸಕ್ತಿ ಬಂದಿದ್ದೇ ಅಚ್ಚರಿ. ನಗರದ ಗೋಪಾಳದ ನಿವಾಸಿ ಅವಿನಾಶ್ ಬಿಬಿಎ ವಿದ್ಯಾಭ್ಯಾಸ ಮಾಡಿದ್ದಾರೆ.
ಬಾಲ್ಯದಿಂದಲೇ ದ್ವಿಚಕ್ರ ವಾಹನ ಗಳನ್ನುಓಡಿಸುವಲ್ಲಿ ಆಸಕ್ತಿ ಹೊಂದಿದ್ದರು. ನಂತರ ಕಾರ್ ರೇಸ್'ಗಳನ್ನು ವೀಕ್ಷಿಸುತ್ತಿದ್ದ ಅವರು ಈ ಕ್ಷೇತ್ರದಲ್ಲಿ ಏನಾದರು ಸಾಧಿಸುವ ಉದ್ದೇಶದಿಂದ ಕಾರ್'ಗಳನ್ನು ಚಲಾಯಿಸುತ್ತಾ ಆಸಕ್ತಿ ಹೊಂದಿದರು. ಯಾವುದೇ ತರಬೇತುದಾರರಿಲ್ಲದೆ ನಿರಂತರ ಶ್ರಮ ಹಾಗೂ ಅಭ್ಯಾಸದಿಂದ ಸ್ವತಃ ಕಾರ್ ರೇಸ್'ಗಳಲ್ಲಿ ಭಾಗವಹಿಸುವ ಪ್ರಾವಿಣ್ಯತೆ ಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದ ಕಾರ್ ರೇಸ್'ನಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಮಲೆನಾಡಿನಲ್ಲೇ ಮೊಟ್ಟ ಮೊದಲ ಕಾರ್ ರೇಸ್'ಗಳಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಯಾಗಿ ಹೊರಹೊಮ್ಮಿರುವ ಪ್ರತಿಭೆಯಾಗಿ ಮಿಂಚುತ್ತಿದ್ದಾರೆ.
ತಮ್ಮ ನಿರಂತರ ಅಭ್ಯಾಸದಿಂದಾಗಿ ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು, ಮೂಡಿಗೆರೆ, ಮಡಿಕೇರಿ ಸೇರಿದಂತೆ ರಾಜ್ಯ ಮಟ್ಟದಲ್ಲಿ 30 ಟ್ರೋಫಿ, ರಾಷ್ಟ್ರಮಟ್ಟದಲ್ಲಿ 15ಕ್ಕೂ ಹೆಚ್ಚು ಟ್ರೋಫಿಗಳನ್ನು ತಮ್ಮ ಮುಡಿಗೇರಿಸಿ ಕೊಂಡಿರುವ ಅವಿನಾಶ್ ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧಿಸಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಈಗಾಗಲೇ ಎಸ್'ಎಂಎಸ್'ಸಿಐ 2 ವಿಲ್ ಡ್ರೈವ್ ಕಪ್' ರ್ಯಾಲಿಯಲ್ಲಿ ವಿಜೇತರಾಗಿದ್ದಾರೆ.
ಅವಿನಾಶ್'ರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಮನೆಯಲ್ಲಿ ಪೋಷಕರು, ಸ್ನೇಹಿತರ ಪ್ರೋತ್ಸಾಹದಿಂದ ಈ ಹಂತ ತಲುಪಿದ್ದೇನೆ. ರೇಸ್'ನಲ್ಲಿ ಭಾಗವಹಿಸುವಾಗ ಹಗಲು ರಾತ್ರಿ ಕಷ್ಟಪಟ್ಟು ಕಾರ್'ಗಳನ್ನು ರೆಡಿ ಮಾಡಿಕೊಡುವ ಸರ್ವಿಸ್ ಟೀಮ್ ಮೋಹಿನ್ ಪಾಷಾ ಅವರ ಸಹಕಾರ ಇದೆ ಎಂದು ತಿಳಿಸಿದರು. ಆರಂಭದಲ್ಲಿ ತಮ್ಮ ಹಣದಿಂದ ರ್ಯಾಲಿಯಲ್ಲಿ ಭಾಗವಹಿಸಿದ್ದ ಅವಿನಾಶ್'ಗೆ ನಂತರದ ದಿನಗಳಲ್ಲಿ ಪ್ರಾಯೋಜಕತ್ವದಲ್ಲಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯವರು, ಬೆಂಗಳೂರಿನ ಸ್ಥಳೀಯ ಲಕ್ಷ್ಮೀ ವ್ಯಾಕ್ಯೂಮ್ ಲಿಮಿಟೆಡ್, ಜೆವಿಸನ್, ರಿಯಾಸ್ ಸ್ಟುಡಿಯೊದವರು ಸಹಕಾರ ನೀಡುತ್ತಿದ್ದಾರೆ. ಒಂದು ರ್ಯಾಲಿಯಲ್ಲಿ ಭಾಗವಹಿಸಲು ಸುಮಾರು 7 ರಿಂದ 8 ಲಕ್ಷದವರೆಗೆ ಖರ್ಚು ಬರುತ್ತಿದ್ದು, ಈ ಕ್ಷೇತ್ರದಲ್ಲೇ ಮತ್ತಷ್ಟು ಸಾಧನೆ ಮಾಡಲು ಮತ್ತಷ್ಟು ಕಂಪನಿಗಳ ಪ್ರಾಯೋಜಕತ್ವದ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.