ಹಿಂದಿ ಹೇರಿಕೆಗೆ ಭಾರೀ ವಿರೋಧ ಬೆನ್ನಲ್ಲೇ ತಮಿಳು ಹೊಗಳಿ ಮಾತನಾಡಿದ ಪ್ರಧಾನಿ!

By Web DeskFirst Published Oct 1, 2019, 7:56 AM IST
Highlights

ಮೋದಿ ತಮಿಳ್ನಾಡು ಭೇಟಿ: ತಮಿಳು ಹೊಗಳಿ, ತಮಿಳು ಮಾತನಾಡಿದ ಪ್ರಧಾನಿ| ಹಿಂದಿ ಹೇರಿಕೆ ವಿವಾದ ತಣ್ಣಗಾಗಿಸಲು ಮೋದಿ ಯತ್ನ?

ಚೆನ್ನೈ[ಅ.01]: ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಕೆಂಡಕಾರುತ್ತಿರುವಾಗಲೇ, ತಮಿಳುನಾಡಿಗೆ ಸೋಮವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳಿನಲ್ಲಿ ಮಾತನಾಡಿ, ತಮಿಳನ್ನು ಹೊಗಳಿದ್ದಾರೆ.

ನಾನು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ತಮಿಳಿನಲ್ಲಿ ಒಮ್ಮೆ ಮಾತನಾಡಿದ್ದೆ. ಇದು ಒಂದು ಪುರಾತನ ಭಾಷೆ ಎಂದು ಹೇಳಿದ್ದೆ. ಇಡೀ ಅಮೆರಿಕದಲ್ಲಿ ಈಗಲೂ ಪ್ರತಿಧ್ವನಿಸುತ್ತಿದೆ ಎಂದು ಮೋದಿ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ತಿಳಿಸಿದರು. ಇದೇ ವೇಳೆ, ‘ಚೆನ್ನೈ ಜನರನ್ನು ಭೇಟಿಯಾಗಲು ಸಂತೋಷವಾಗುತ್ತಿದೆ’ ಎಂದು ಮೋದಿ ಅವರು ತಮಿಳಿನಲ್ಲೇ ಹೇಳಿದರು.

ನಂತರ ಐಐಟಿ ಮದ್ರಾಸ್‌ನ 56ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿಶಿಷ್ಟತೆಯಿಂದ ಕೂಡಿರುವ ತಮಿಳುನಾಡಿನಲ್ಲಿ ನಾವಿದ್ದೇವೆ. ಪುರಾತನ ಭಾಷೆಯಾದ ತಮಿಳಿನ ತವರೂರು ಇದು ಎಂದು ಹೇಳಿದರು. ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿಹರ್ಷ ವ್ಯಕ್ತಪಡಿಸಿದರು.

ದೇಶಕ್ಕೆ ಒಂದು ಸಮಾನ ಭಾಷೆ ಇರಬೇಕು ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಕ್ಕೆ ದಕ್ಷಿಣ ಭಾರತ ಅದರಲ್ಲೂ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕೆರಳಿರುವ ತಮಿಳರನ್ನು ತಣಿಸಲು ಮೋದಿ ಅವರು ತಮಿಳು ಹಾಗೂ ತಮಿಳುನಾಡನ್ನು ಹೊಗಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

click me!