ನೀವು ಫೋನ್‌ ಕದ್ದಾಲಿಸಿಲ್ವಾ? ಹಾಗಿದ್ರೆ ಭಯ ಬೇಡ: ಅಶೋಕ್‌

By Web DeskFirst Published Oct 1, 2019, 7:35 AM IST
Highlights

ನೀವು ಫೋನ್‌ ಕದ್ದಾಲಿಸಿಲ್ವಾ? ಹಾಗಿದ್ರೆ ಭಯ ಬೇಡ: ಅಶೋಕ್‌| ಚುಂಚ ಶ್ರೀಗಳ ಫೋನ್‌ ಕದ್ದಾಲಿಸಿದವರದ್ದು ಅಕ್ಷಮ್ಯ ತಪ್ಪು| ಎಚ್‌ಡಿಕೆ ಕದ್ದಾಲಿಕೆ ಮಾಡಿಲ್ಲದಿದ್ದರೆ ಭಯಪಡುವ ಅಗತ್ಯವಿಲ್ಲ

ಬೆಂಗಳೂರು[ಅ.01]: ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ ಕದ್ದಾಲಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ನಾನು ಏನನ್ನೂ ಮಾತನಾಡಿಲ್ಲ. ಯಾವ ಸರ್ಕಾರ ಫೋನ್‌ ಕದ್ದಾಲಿಕೆ ಮಾಡಿದೆಯೋ ಆ ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ ಎಂದು ಹೇಳಿದ್ದೇನೆ. ಅವರು ತಪ್ಪು ಮಾಡದಿದ್ದರೆ ಭಯಪಡುವ ಅಗತ್ಯವಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ ಕದ್ದಾಲಿಕೆ ಆಗಿರುವುದು ಸತ್ಯ. ಅಧಿಕಾರಿಗಳೇ ನಮಗೆ ಈ ಮಾಹಿತಿ ನೀಡಿದ್ದಾರೆ. ಹೀಗಾಗಿ ಯಾವ ಸರ್ಕಾರ ಫೋನ್‌ ಕದ್ದಾಲಿಕೆ ಮಾಡಿದೆಯೋ ಆ ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ ಎಂದು ಹೇಳಿದ್ದೇನೆ. ಆದರೆ ಇಂತಹದ್ದೇ ಸರ್ಕಾರ ಮಾಡಿದೆ ಎಂದು ಹೇಳಿಲ್ಲ. ತಪ್ಪು ಮಾಡದವರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ನಾನು ಸರ್ಕಾರದ ಭಾಗವಾಗಿದ್ದೇನೆ. ನಿರ್ಮಲಾನಂದನಾಥ ಸ್ವಾಮೀಜಿ ಅವರ ದೂರವಾಣಿ ಕದ್ದಾಲಿಕೆ ಆಗಿದೆ ಎಂಬುದು ಸತ್ಯ. ದೂರವಾಣಿ ಕದ್ದಾಲಿಕೆ ಆಗಿರುವುದಾಗಿ ತನಿಖೆಗೆ ಮೊದಲೇ ಅಧಿಕಾರಿಗಳು ಮಾಹಿತಿ ನೀಡಿದ್ದರು. ಏನೂ ಆಗಿಲ್ಲ ಎಂದರೆ ನಾವು ಹೇಗೆ ತನಿಖೆಗೆ ಕೊಡಲು ಸಾಧ್ಯ? ಇದರಲ್ಲಿ ಮುಚ್ಚುಮರೆ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

ಸಿಬಿಐ ತನಿಖೆ ಆಗುತ್ತಿದೆ. ಸತ್ಯ ಹೊರಗೆ ಬರಲಿದೆ. ಅವರು ತಪ್ಪು ಮಾಡದೇ ಇದ್ದರೆ ಭಯಪಡುವ ಅಗತ್ಯ ಇಲ್ಲ. ಅವರು ನಮ್ಮ ಸಮುದಾಯದ ಸ್ವಾಮೀಜಿ. ಹೀಗಾಗಿ ಯಾವುದೇ ವ್ಯಕ್ತಿ, ಪಕ್ಷ ತಪ್ಪು ಮಾಡಿದ್ದರೂ ಅದು ಪಾಪದ ಕೆಲಸ ಎಂದು ಹೇಳಿದ್ದೇನೆ ಎಂದರು.

ತಪ್ಪು ಮಾಡದಿದ್ದರೆ ಹೊರಬರುತ್ತಾರೆ:

ಡಿ.ಕೆ. ಶಿವಕುಮಾರ್‌ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಬಂಧನ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್‌ಗೆ ಜಾರಿ ನಿರ್ದೇಶನಾಲಯ ನೀಡಲಾಗಿದೆ ಎನ್ನಲಾದ ನೋಟಿಸ್‌ ಪ್ರಕರಣಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ತಪ್ಪು ಮಾಡಿದ್ದರೆ ಕ್ರಮ ಎದುರಿಸುತ್ತಾರೆ, ಇಲ್ಲದಿದ್ದರೆ ಆರೋಪ ಮುಕ್ತವಾಗುತ್ತಾರೆ ಎಂದು ಹೇಳಿದರು.

ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಕಾನೂನು, ಜಾರಿ ನಿರ್ದೇಶನಾಲಯಗಳು ಎಲ್ಲವನ್ನೂ ನೋಡಿಕೊಳ್ಳುತ್ತವೆ. ನಿಯಮಗಳ ಅನುಸಾರ ಜಾರಿ ನಿರ್ದೇಶನಾಲಯ ಕಾನೂನು ಕ್ರಮ ಕೈಗೊಳ್ಳಲಿದೆ. ಡಿ.ಕೆ. ಶಿವಕುಮಾರ್‌ ಹಾಗೂ ಸುರೇಶ್‌ ಅವರೇ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನೋಟಿಸ್‌ಗೆ ಅವರೇ ಉತ್ತರ ಕೊಡುತ್ತಾರೆ. ತಪ್ಪು ಮಾಡಿದ್ದರೆ ಕ್ರಮ ಎದುರಿಸುತ್ತಾರೆ, ಇಲ್ಲದಿದ್ದರೆ ಆರೋಪಮುಕ್ತರಾಗಿ ಹೊರಬರುತ್ತಾರೆ ಎಂದು ಹೇಳಿದರು.

ಜಾರಿ ನಿರ್ದೇಶನಾಲಯ ಹಾಗೂ ಚುನಾವಣಾ ಆಯೋಗ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಅಂತಹ ಸಂಸ್ಥೆಗಳನ್ನು ನಾವು ಯಾವುದೇ ಕಾರಣಕ್ಕೂ ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ವಿರೋಧಪಕ್ಷಗಳ ಆರೋಪಗಳು ರಾಜಕೀಯ ಪ್ರೇರಿತ ಎಂದು ಹೇಳಿದರು.

ಬಿಎಸ್‌ವೈ ಜೊತೆ ನಾವಿದ್ದೇವೆ:

ನನ್ನದು ತಂತಿಯ ಮೇಲಿನ ನಡಿಗೆ ಎಂಬ ಬಿ.ಎಸ್‌. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ನಾವಿದ್ದೇವೆ. ಅವರಿಗೇ ನಾವು ಬೆಂಬಲ ಕೊಡುತ್ತೇವೆ. ಮೂರೂವರೆ ವರ್ಷ ಅವರು ಮುಖ್ಯಮಂತ್ರಿ ಆಗಿ ಆಡಳಿತ ಮಾಡುತ್ತಾರೆ. ಮುಖ್ಯಮಂತ್ರಿ ಹಾಗೂ ನಳಿನ್‌ ಕುಮಾರ್‌ ಕಟೀಲ್‌ ನಡುವೆ ಏನೇನು ನಡೆದಿದೆಯೋ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಅನರ್ಹ ಶಾಸಕರಿಗೆ ಒಳ್ಳೆಯದಾಗುತ್ತದೆ: ಅಶೋಕ್‌

ಅನರ್ಹ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಆರ್‌. ಅಶೋಕ್‌, ‘ಅವರಿಗೆ’ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಉಮೇಶ್‌ ಕತ್ತಿ ಅವರು ಅನರ್ಹ ಶಾಸಕರ ಬಗ್ಗೆ ಯಾವ ಅರ್ಥದಲ್ಲಿ ಹೇಳಿಕೆ ಕೊಟ್ಟರೋ ಗೊತ್ತಿಲ್ಲ. ಆದರೆ ಅವರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಈ ಮೂಲಕ ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದ ಉಮೇಶ್‌ ಕತ್ತಿ ಅವರ ಹೇಳಿಕೆಯನ್ನು ತಳ್ಳಿ ಹಾಕಿದರು.

click me!