ಸುಪ್ರೀಂ ಆದೇಶ ಉಲ್ಲಂಘಿಸಿಲ್ಲ : ಸಿಎಂ

By Internet DeskFirst Published Sep 26, 2016, 3:57 PM IST
Highlights

ಕೊಳ್ಳೇಗಾಲ(ಸೆ.26): ‘‘ನಾನು ಸುಪ್ರಿಂಕೋರ್ಟ್‌ ಆದೇಶ ಉಲ್ಲಂಘಿಸುತ್ತಿಲ್ಲ, ನಮಗೇ ಕುಡಿಯುವ ನೀರಿಲ್ಲ. ಇನ್ನು ತಮಿಳುನಾಡಿಗೆ ಹೇಗೆ ನೀರು ಕೊಡಲು ಸಾಧ್ಯ. ನನಗೆ ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ, ಕೋರ್ಟ್‌ ಆದೇಶಕ್ಕೆ ನಾನು ಸಡ್ಡು ಹೊಡೆಯುತ್ತಿಲ್ಲ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ .47 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಈ ವಿಚಾರ ತಿಳಿಸಿದರು. ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಆದರೆ ಅವರು ಯಾಕೋ ಈ ವಿಚಾರದಲ್ಲಿ ಮೌನ ತಳೆದಿದ್ದಾರೆ. ಮಧ್ಯ ಪ್ರವೇಶಿಸಲೂ ಸಿದ್ಧರಿಲ್ಲ. ಸರ್ಕಾರ ಕಾವೇರಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಸುಪ್ರೀಂ ಕೋರ್ಟ್‌ ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಬಿಡುವಂತೆ ಆದೇಶಿಸಿದೆ. ಆದರೆ ಕರ್ನಾಟಕದ ಜಲಾಶಯದಲ್ಲಿರೋದು ಕೇವಲ 26 ಟಿಎಂಸಿ ನೀರು ಮಾತ್ರ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 52 ಟಿಎಂಸಿ ನೀರಿದೆ. ನಮಗೆ ಕುಡಿಯುಲೇ ನೀರಿಲ್ಲ. ಹಾಗಾಗಿ ಸಾಂಬಾ ಬೆಳೆಗೆ ನೀರು ಬಿಡಲು ಹೇಗೆ ಸಾಧ್ಯ?

Latest Videos

ನನಗೆ ಹಾಗೂ ಸರ್ಕಾರಕ್ಕೆ ಏನೇ ಕಷ್ಟಬಂದರೂ ಜನರ ರಕ್ಷಣೆ ನನ್ನ ಕರ್ತವ್ಯ. ಹಾಗಾಗಿ ಕುಡಿಯುವ ನೀರಿಗಷ್ಟೇ ನೀರು ಬಿಡಲು ಸರ್ವ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ತೀರ್ಮಾನ ಕೈಗೊಂಡಿದ್ದೇನೆ. ನಾನು ಸುಪ್ರಿಂ ಕೋರ್ಟ್‌ ತೀರ್ಪು ಉಲ್ಲಂಘಿಸುತ್ತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆæ. ನಾನು ಆ ಕೆಲಸ ಮಾಡಿಲ್ಲ. ನ್ಯಾಯಾಲಯದ ಬಗ್ಗೆ ಗೌರವವಿದೆ ಎಂದರು.

ಸಮೃದ್ಧ ಮಳೆಗೆ ಪ್ರಾರ್ಥ​ನೆ

ಸದ್ಯದ ಕಾವೇರಿ ಬಿಕ್ಕಟ್ಟಿಗೆ ಮಳೆಯೊಂದೇ ಪರಿಹಾರ. ಹೀಗಾಗಿ ಸಮೃದ್ಧ ಮಳೆ ಆಗಲಿ ಎಂದು ಮಹದೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ. ಕಾವೇರಿ ವಿಚಾರದಲ್ಲಿ 124 ವರ್ಷಗಳಿಂದಲೂ ಅನ್ಯಾಯ ಆಗುತ್ತಲೇ ಇದೆ. ಪ್ರಸ್ತುತ ನ್ಯಾಯಕ್ಕಾಗಿ ಹೋರಾಟ ಅನಿವಾರ್ಯವಾಗಲಿದೆ. ಈಗ ಈ ವಿಚಾರದಲ್ಲಿ ರಾಜ್ಯದ ಜನರಿಗೆ ನ್ಯಾಯ ಸಿಗುವಂತೆ ಮಾಡಪ್ಪ ಎಂದು ಮಹದೇಶ್ವರನಲ್ಲಿ ಬೇಡಿಕೊಂಡಿದ್ದೇನೆ ಎಂದು ಸಿಎಂ ತಿಳಿಸಿದರು.

click me!