ಕಾವೇರಿ ವಿಚಾರ: ನೀರು ಬಿಡುವವರೆಗೂ ಕರ್ನಾಟಕದ ಅರ್ಜಿ ಆಲಿಸದಿರಲು ಸುಪ್ರೀಂಗೆ ತಮಿಳುನಾಡಿನ ಮೊರೆ

By Internet DeskFirst Published Sep 26, 2016, 3:09 PM IST
Highlights

ಬೆಂಗಳೂರು(ಸೆ.27): ಇವತ್ತು ಸುಪ್ರೀಂ ಕೋರ್ಟ್​ ಕಾವೇರಿ ನೀರಿನ ಭವಿಷ್ಯವನ್ನು ನಿರ್ಧರಿಸಲಿದೆ. ಕಾವೇರಿ ನೀರು ಬಿಡುಗಡೆಗೆ ಸರ್ವೋಚ್ಛ ನ್ಯಾಯಾಲಯ ನೀಡಿದ್ದ ಆದೇಶ ಮರು ಪರಿಶೀಲಿಸುವಂತೆ ಕರ್ನಾಟಕ ನಿನ್ನೆಯಷ್ಟೇ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈ ಬೆನ್ನಲ್ಲೇ ತಮಿಳುನಾಡು ತಕರಾರು ಸಹ ಸಲ್ಲಿಸಿದೆ. ಹೀಗಾಗಿ ಇವತ್ತಿನ ಕೋರ್ಟ್ ವಿಚಾರಣೆ ಮಹತ್ವ  ಪಡೆದಿದ್ದು ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.

ನಿತ್ಯ ತಮಿಳ್ನಾಡಿಗೆ 6 ಸಾವಿರ ಕ್ಯೂಸೆಕ್‌‌ ನೀರು ಬಿಡಲು ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍'ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ. ಸೆಪ್ಟೆಂಬರ್ 20ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆಗೆ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಕೋರ್ಟ್‍ಗೆ ಮನವರಿಕೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಕಾವೇರಿ ಜಲಾನಯನ ಪ್ರದೇಶಕ್ಕೆ ಕುಡಿಯಲು ಮಾತ್ರ ನೀರು ಉಳಿದಿದೆ ಅಂತ ಸರ್ಕಾರ ಸುಪ್ರೀಂಗೆ ಹೇಳಿದೆ. ಈ ಬಗ್ಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಕೈಗೊಂಡಿರುವ ನಿರ್ಣಯದ ಪ್ರತಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದೆ. ಜೊತೆಗೆ ಕಾವೇರಿ ನಿರ್ವಹಣಾ ಮಂಡಳಿಯನ್ನು ಕೇಂದ್ರ ಸರ್ಕಾರ ರಚಿಸುವಂತೆ ನೀಡಿರುವ ಆದೇಶವನ್ನು ಕೂಡ ಮಾರ್ಪಾಡಿಗೆ ರಾಜ್ಯ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಮನವಿ ಮಾಡಿದೆ.

Latest Videos

ಆದರೆ ರಾಜ್ಯದ ಅರ್ಜಿಗೆ ತಮಿಳುನಾಡು ತಕರಾರು ತೆಗೆದಿದೆ. ನೀರು ಬಿಡುಗಡೆ ಮಾಡುವವರೆಗೂ ಕರ್ನಾಟಕದ ಅರ್ಜಿ ವಿಚಾರಣೆ ಬೇಡ ಅಂತ ಸುಪ್ರೀಂಕೋರ್ಟ್​ ಅನ್ನು ಕೋರಿಕೊಂಡಿದೆ. ಆದೇಶ ಪಾಲಿಸದೇ ಇರೋದು ನ್ಯಾಯಾಲಯದ ಘನತೆಯನ್ನು ಕುಂದಿಸುವ ಯತ್ನ ಅಂತ ತಮಿಳುನಾಡು ವಾದಿಸಿದೆ.

ಒಟ್ನಲ್ಲಿ ಕರ್ನಾಟಕದ ಅರ್ಜಿ ಮತ್ತು ತಮಿಳುನಾಡಿನ ಆಕ್ಷೇಪಣೆ ಭರಿತ ಪ್ರತಿ ಇವತ್ತು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಬರಲಿದೆ. ಇಲ್ಲಿ ಕರ್ನಾಟಕ ವಿಧಾನ ಮಂಡಲದ ನಿರ್ಣಯವನ್ನ ದ್ವಿಸದಸ್ಯ  ಪೀಠದಲ್ಲಿರೋ ಮಾನ್ಯ ನ್ಯಾಯಮೂರ್ತಿಗಳು ಹೇಗೆ ಪರಿಗಣಿಸುತ್ತಾರೆ ಅನ್ನೋದು ಮಹತ್ವ ಪಡೆದಿದೆ.

click me!