ಉತ್ತರ ಕೊರಿಯಾ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ? ಗಲ್ಲಿಗೇರಿಸಿದರೆ ಹುಷಾರ್ ಎಂದು ಪಾಕ್'ಗೆ ಎಚ್ಚರಿಕೆ

Published : Apr 12, 2017, 02:49 AM ISTUpdated : Apr 11, 2018, 12:46 PM IST
ಉತ್ತರ ಕೊರಿಯಾ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ? ಗಲ್ಲಿಗೇರಿಸಿದರೆ ಹುಷಾರ್ ಎಂದು ಪಾಕ್'ಗೆ ಎಚ್ಚರಿಕೆ

ಸಾರಾಂಶ

ಸಿರಿಯಾ ದಾಳಿ, ಮೂರನೇ ಮಹಾವಿಶ್ವಯುದ್ಧಕ್ಕೆ ಕಾರಣವಾಗಬಹುದು ಎಂಬ ವಿಶ್ಲೇಷಣೆಗಳ ಬೆನ್ನಲ್ಲೇ ಅಮೆರಿಕದ ಈ ಹೊಸ ನಡೆ ಜಾಗತಿಕ ಸಮುದಾಯವನ್ನು ಮತ್ತಷ್ಟುಆತಂಕದ ಮಡುವಿಗೆ ತಳ್ಳಿದೆ. ಅದರಲ್ಲೂ ಉತ್ತರ ಕೊರಿಯಾದ ನೆರವಿಗೆ ಚೀನಾ ಮುಂದಾಗಿರುವುದು ವಿಶ್ವದ ಎರಡು ದೈತ್ಯ ಶಕ್ತಿಗಳ ನಡುವಿನ ಸಮರದ ಸಾಧ್ಯತೆಯನ್ನು ಮತ್ತಷ್ಟುಹೆಚ್ಚಿಸಿದೆ.

ಬೀಜಿಂಗ್‌/ ವಾಷಿಂಗ್ಟನ್‌(ಏ.12): ವಿಷಾನಿಲ ದಾಳಿ ನಡೆಸಿ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಸಿರಿಯಾಕ್ಕೆ ಪಾಠ ಕಲಿಸಲು ಇತ್ತೀಚೆಗೆ ಆ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ಅಮೆರಿಕ, ಹಲವು ವರ್ಷಗಳಿಂದ ತನ್ನ ವಿರುದ್ಧ ಮಸಲತ್ತು ನಡೆಸುತ್ತಿರುವ ಉತ್ತರ ಕೊರಿಯಾವನ್ನು ತನ್ನ ಮುಂದಿನ ದಾಳಿಗಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. 
ಸಿರಿಯಾ ದಾಳಿ, ಮೂರನೇ ಮಹಾವಿಶ್ವಯುದ್ಧಕ್ಕೆ ಕಾರಣವಾಗಬಹುದು ಎಂಬ ವಿಶ್ಲೇಷಣೆಗಳ ಬೆನ್ನಲ್ಲೇ ಅಮೆರಿಕದ ಈ ಹೊಸ ನಡೆ ಜಾಗತಿಕ ಸಮುದಾಯವನ್ನು ಮತ್ತಷ್ಟುಆತಂಕದ ಮಡುವಿಗೆ ತಳ್ಳಿದೆ. ಅದರಲ್ಲೂ ಉತ್ತರ ಕೊರಿಯಾದ ನೆರವಿಗೆ ಚೀನಾ ಮುಂದಾಗಿರುವುದು ವಿಶ್ವದ ಎರಡು ದೈತ್ಯ ಶಕ್ತಿಗಳ ನಡುವಿನ ಸಮರದ ಸಾಧ್ಯತೆಯನ್ನು ಮತ್ತಷ್ಟುಹೆಚ್ಚಿಸಿದೆ.

 

ಇದಕ್ಕೆ ಪೂರಕವೆಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಂಗಳವಾರ ಸರಣಿ ಟ್ವೀಟ್‌ ಮಾಡಿ, ಕೊರಿಯಾ ಸಮಸ್ಯೆ ಇತ್ಯರ್ಥಕ್ಕೆ ಚೀನಾ ನೆರವು ನೀಡಿದರೆ ಉತ್ತಮ. ಇಲ್ಲದೇ ಹೋದಲ್ಲಿ ಅದನ್ನು ಇತ್ಯರ್ಥಪಡಿಸಲು ನಾವು ಸಮರ್ಥರಿದ್ದೇವೆ ಎನ್ನುವ ಮೂಲಕ ತಮ್ಮ ಇರಾದೆ ಏನಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಕೊರಿಯಾ ಮೇಲೆ ದಾಳಿ

ವಿಶ್ವಸಂಸ್ಥೆಯ ನಿಷೇಧದ ಹೊರತಾಗಿಯೂ ಇತ್ತೀಚೆಗೆ ಸರಣಿಯಾಗಿ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ವಿಶ್ವಸಮುದಾಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ಉತ್ತರ ಕೊರಿಯಾ ಮೇಲೆ ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಉ.ಕೊರಿಯಾ ಸರ್ವಾಧಿಕಾರಿ ಜೊಂಗ್‌, ಪದೇ ಪದೇ ಅಮೆರಿಕವನ್ನೇ ತಮ್ಮ ವಾಗ್ದಾಳಿಯ ಗುರಿಯಾಗಿಸಿಕೊಂಡಿದ್ದರು. 

ಚೀನಾ ಸೇನೆ, ಅಮೆರಿಕ ಹಡಗು ರವಾನೆ

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ, ತನ್ನ ಮಿತ್ರ ಉ. ಕೊರಿಯಾದ ನೆರವಿಗೆ ಮುಂದಾಗಿರುವ ಚೀನಾ, ತನ್ನ 1,50,000 ಸೈನಿಕರನ್ನು ಉ. ಕೊರಿಯಾದ ಗಡಿ ಪ್ರದೇಶಕ್ಕೆ ರವಾನೆ ಮಾಡಿದೆ. ಈ ನಡುವೆ, ತನ್ನ ಯುಎಸ್‌ಎಸ್‌ ಕಾರ್ಲ್ ವಿನ್ಸನ್‌ ಯುದ್ಧ ನೌಕೆಯನ್ನು ಅಮೆರಿಕವು, ಉ.ಕೊರಿಯಾದತ್ತ ಕಳಿಸಿದೆ.

ಮಾಜಿ ನೌಕಾಪಡೆ ಅಧಿಕಾರಿಗೆ ಗಲ್ಲಾದರೆ ಪರಿಣಾಮ ನೆಟ್ಟಗಿರಲ್ಲ

ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ ಜಾಧವ್‌ ಅವರನ್ನು ‘ಗುಪ್ತಚರ' ಎಂದು ಬಿಂಬಿಸಿ, ಗೂಢಚಾರಿಕೆ ನಡೆಸಿದ ಹಾಗೂ ವಿಧ್ವಂಸಕ ಕೃತ್ಯ ಎಸಗಿದೆ ಆರೋಪದಲ್ಲಿ ಅವರನ್ನು ನೇಣುಗಂಬಕ್ಕೆ ಏರಿಸಲು ಆದೇಶ ನೀಡಿರುವ ಪಾಕಿಸ್ತಾನದ ವಿರುದ್ಧ ಭಾರತ ಸಿಡಿದೆದ್ದಿದೆ. ಜಾಧವ್‌ ಅವರನ್ನು ನೇಣಿಗೇರಿಸಿದರೆ, ‘ತಕ್ಕ ಪರಿಣಾಮ' ಎದುರಿಸಬೇಕಾದೀತು ಎಂದು ಭಾರತ ಸರ್ಕಾರ ಮಂಗಳವಾರ ಎಚ್ಚರಿಸಿದೆ. ಅಲ್ಲದೆ, ಜಾಧವ್‌ರನ್ನು ಶತಾಯಗತಾಯ ರಕ್ಷಿಸಲು ‘ವ್ಯಾಪ್ತಿ ಮೀರಿ' ಯತ್ನಿಸುವುದಾಗಿ ಘೋಷಿಸಿದೆ.
ಮಂಗಳವಾರ ಭಾರತದ ಸಂಸತ್ತಿನ ಒಳಗೆ ಮತ್ತು ಹೊರಗೆ ಎಲ್ಲ ಪಕ್ಷಗಳು, ಜನತೆ ಒಟ್ಟಾಗಿ ಪಾಕಿಸ್ತಾನದ ಈ ದುರುದ್ದೇಶಪೂರ್ವಕ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

 

ಸಂಸತ್ತಿನಲ್ಲಿ ಆಕ್ರೋಶ

ಲೋಕಸಭೆ ಮತ್ತು ರಾಜ್ಯಸಭೆ ಯಲ್ಲಿ ಪಕ್ಷಗಳು ತಮ್ಮ ನಡುವಿನ ಭಿನ್ನಮತ ಮರೆತು, ಕುಲಭೂಷಣ್‌ರನ್ನು ಶತಾಯ ಗತಾಯ ಬದುಕಿಸಿಕೊಳ್ಳಲೇ ಬೇಕು. ಇದಕ್ಕೆ ತಕ್ಕ ಕ್ರಮಗಳನ್ನು ಭಾರತ ಸರ್ಕಾರ ಜರುಗಿಸಬೇಕು ಎಂದು ಆಗ್ರಹಿಸಿದವು. ಇದಕ್ಕೆ ಉಭಯ ಸದನಗಳಲ್ಲಿ ಉತ್ತರ ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ‘ಕುಲಭೂಷಣ್‌ ಗಲ್ಲು ಶಿಕ್ಷೆ ಆದೇಶವನ್ನು ಭಾರತ ‘ಪೂರ್ವನಿರ್ಧರಿತ ಕೊಲೆ' ಎಂದು ಪರಿಗಣಿಸಬೇ ಕಾಗುತ್ತದೆ. ಪಾಕಿಸ್ತಾನದ ಈ ಕ್ರಮ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಬಂಧದ ಮೇಲೆ ತೀವ್ರತರದ ಪರಿಣಾಮ ಬೀರುತ್ತದೆ' ಎಂದು ಎಚ್ಚರಿಸಿದರು.

‘ಜಾಧವ್‌  ಅವರು ಈಗ ಕೇವಲ ಅವರ ತಂದೆ-ತಾಯಿಗೆ ಮಗನಲ್ಲ. ಅವರು ಭಾರತದ ಪುತ್ರ. ಅವರೊಬ್ಬ ಮುಗ್ಧ ವ್ಯಕ್ತಿ. ಅವರ ರಕ್ಷಣೆಗೆ ನಮ್ಮ ಸರ್ಕಾರ ‘ವ್ಯಾಪ್ತಿ ಮೀರಿ' ಯತ್ನಿಸಲಿದೆ' ಎಂದು ಸಚಿವೆ ಭಾವುಕರಾಗಿ ನುಡಿದರು. ‘ಜಾಧವ್‌ ಅವರನ್ನುರಕ್ಷಿಸಲು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಅತ್ಯುತ್ತಮ ವಕೀಲರನ್ನು ನೇಮಿಸಲು ಸಿದ್ಧವಿದೆ' ಎಂದೂ ಸುಷ್ಮಾ ಭರವಸೆ ನೀಡಿದರು.

ತರೂರ್‌ ಗೆ ಗೊತ್ತುವಳಿ ರಚನೆ ಹೊಣೆ

‘ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಪಾಕ್‌ ವಿರುದ್ಧದ ಗೊತ್ತುವಳಿಯ ಕರಡು ರೂಪಿಸಬೇಕು' ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಶಿ, ‘ನಾನು ಗೊತ್ತುವಳಿ ರಚಿಸಲು ಸಿದ್ಧ. ಇದಕ್ಕೆ ನನ್ನ ನಾಯಕರಾದ ಖರ್ಗೆ ಅವರ ಒಪ್ಪಿಗೆ ಬೇಕು' ಎಂದರು. ಕೂಡಲೇ ಖರ್ಗೆ ಇದಕ್ಕೆ ಸಮ್ಮತಿಸಿದರು.

(ಕನ್ನಡಪ್ರಭ ವಾರ್ತೆ)
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: 70 ವರ್ಷದ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ 67 ವರ್ಷದ ನಿವೃತ್ತ ಪ್ರಾಧ್ಯಾಪಕಿ!
ನಾಳೆಯಿಂದಲೇ ಖಾಸಗಿ-ಸರ್ಕಾರಿ ಶೇ.50 ಉದ್ಯೋಗಿಗಳಿಗೆ ರಷ್ಟು ವರ್ಕ್ ಫ್ರಮ್ ಹೋಮ್ ಕಡ್ಡಾಯ