ಒಂದೆಡೆ ಅತಿವೃಷ್ಟಿ - ಇನ್ನೊಂದೆಡೆ ಅನಾವೃಷ್ಟಿ : ಕರ್ನಾಟಕ ದುಸ್ಥಿತಿ

By Web DeskFirst Published Aug 27, 2018, 9:51 AM IST
Highlights

ಕರ್ನಾಟಕದಲ್ಲಿ ಒಂದೆಡೆ ಅತಿವೃಷ್ಟಿಯಾದರೆ ಇನ್ನೊಂದೆಡೆ ಅನಾವೃಷಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಲ್ಲದೇ ಜನರು ಬೇರೆಡೆ ಗುಳೆ ಹೋಗುವಂತಹ ದುಸ್ಥಿತಿ ಎದುರಾಗಿದೆ. 

ಹುಬ್ಬಳ್ಳಿ :  ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಕೊಡಗಿನ ಬೆಟ್ಟ ಗುಡ್ಡಗಳೂ ಗುರುತು ಸಿಗದಷ್ಟು ಕೊಚ್ಚಿ ಹೋಗಿದ್ದರೆ, ಇತ್ತ ಉತ್ತರ ಕರ್ನಾಟಕದಲ್ಲಿ ಬಿತ್ತಿದ ಬೆಳೆಯೂ ಕೈಗೆ ಸಿಗದಂಥ ಬರ ಬಾಧಿಸುತ್ತಿದೆ. ಹೈದರಾಬಾದ್ ಕರ್ನಾಟಕ ಸೇರಿ ಉತ್ತರ ಕರ್ನಾಟಕದ ಬಹುತೇಕ ಕಡೆ ಮುಂಗಾರು ಆರಂಭದಲ್ಲಿ ಅಬ್ಬರ ತೋರಿ ಅನ್ನದಾತರಲ್ಲಿ ಆಸೆ ಹುಟ್ಟಿಸಿದ್ದ ಮಳೆರಾಯ ಮತ್ತೆ ಈ ಕಡೆ ಮುಖ ಮಾಡಿಯೇ ಇಲ್ಲ. 

ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಶೇ.50ಕ್ಕೂ ಹೆಚ್ಚು ಮಳೆ ಕೊರತೆ ಕಾಣಿಸಿಕೊಂಡಿದ್ದರೆ,  ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶೇ. 30ರಿಂದ ಶೇ. 45ರ ವರೆಗೆ ಮಳೆಕೊರತೆಯಾಗಿದೆ. ಪರಿಣಾಮ ಬೆಳೆ ನಷ್ಟವಾಗುವ ಆತಂಕ ಶುರುವಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕಳೆದ ಜು. 2ನೇ ವಾರದಿಂದ ಆ. 2 ನೇ ವಾರದವರೆಗಿನ ಅವಧಿಯಲ್ಲಿ ಸತತ 21 ದಿನಗಳ ಕಾಲ ಹನಿ ಮಳೆಯೂ ಸುರಿಯದಿರುವುದು ಈ ಭಾಗದ ಬರದ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ.

Latest Videos

ಶೇ. 50ರಷ್ಟೂ ಬಿತ್ತನೆಯಾಗಿಲ್ಲ: ಮಳೆಯಿಲ್ಲದೆ ಕೆಲ ಜಿಲ್ಲೆಗಳಲ್ಲಿ ಶೇ.50 ರಷ್ಟೂ ಬಿತ್ತನೆಯಾಗಿಲ್ಲ. ಜಾನು ವಾರುಗಳ ಮೇವಿಗೂ ತತ್ವಾರದ ಸ್ಥಿತಿ ಇದೆ. ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿನ ಜನತೆಗೆ ಉದ್ಯೋಗ ಅರಸಿ ಗುಳೇ ಹೋಗುವುದು ಅನಿವಾರ್ಯವಾಗಿದೆ. 

ಮಳೆ ಕೊರತೆಯಿಂದಾಗಿ ತೊಗರಿ, ಹತ್ತಿ, ಜೋಳ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿರುವುದನ್ನು ಕಣ್ಣಾರೆ ನೋಡಲಾಗದ ರೈತರು ಅಂಥ ಬೆಳೆಗಳನ್ನು ಹರಗಿ ಕಣ್ಣೀರು ಹಾಕುತ್ತಿದ್ದಾರೆ. ಬಿತ್ತಿದ ಬೀಜವೂ ಇಲ್ಲ, ಸಾಲ ತಲೆ ಮೇಲೆ ಏರುತ್ತಿರುವುದರಿಂದ ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಿಸಿದ್ದರೂ ಅನ್ನದಾತರ ಆತ್ಮಹತ್ಯೆಯ ಡಂಗುರ ಕೇಳಿಸುತ್ತಲೇ ಇದೆ. ಪಶ್ಚಿಮಘಟ್ಟದಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ವರದಾ ಹಾಗೂ ಕೊಪ್ಪಳ, ಬಳ್ಳಾರಿಯಲ್ಲಿ ಹಾದು ಹೋಗುವ ತುಂಗಭದ್ರಾ ನದಿಗಳು ತುಂಬಿ ಹರಿದಿ ದ್ದರಿಂದ ಸದ್ಯಕ್ಕೆ ಕುಡಿಯುವ ನೀರಿನ ಅಭಾವ ಇಲ್ಲ.

ಹೀಗೆ ಉಕ್ಕಿ ಹರಿದ ನದಿಗಳು ಇಕ್ಕೆಲದಲ್ಲಿ ನೆರೆಭೀತಿ ಹುಟ್ಟಿಸಿ ಅಷ್ಟಿಷ್ಟು ಚಿಗುರಿದ್ದ ಬೆಳೆಯನ್ನೂ ಕೊಚ್ಚಿ ಕೊಂಡು ಹೋಗಿವೆ. ಇನ್ನು ಕಲಬುರಗಿ ಜಿಲ್ಲೆಯ ನದಿ ಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಜಿಲ್ಲೆಯ ಜೀವನದಿ ಭೀಮಾ, ಕಾಗಿಣಾ, ಕಮಲಾವತಿ, ಅಮರ್ಜಾ, ಮುಲ್ಲಾಮಾರಿ, ಬೆಣ್ಣೆತೊರಾ, ಬೀದರ್ ನ ಕಾರಂಜಾ, ದೇವಣಿಯಂತಹ ನದಿಗಳ ಪಾತ್ರ ನೀರಿಲ್ಲದೆ ಭಣಗುಡುತ್ತಿವೆ. ಮಳೆಗಾಲದಲ್ಲಿ ಈ ನದಿಯಲ್ಲಿ ಇಷ್ಟೊತ್ತಿಗಾಗಲೇ ಪ್ರವಾಹ ಉಕ್ಕೇರ ಬೇಕಿತ್ತು. ಆದರೆ ಈ ಬಾರಿ ಪ್ರವಾಹದ ಮಾತಿರಲಿ, ಹನಿ ನೀರೂ ಈ ನದಿಗಳಲ್ಲಿ ಕಾಣದೆ ನದಿ ತೀರದ ಜನ ಜಾನುವಾರುಗಳು ಬವಣೆ ಪಡುವಂತಾಗಿದೆ.

ಧಾರವಾಡ ಜಿಲ್ಲೆಯ ಕೆಲಭಾಗಗಳಲ್ಲಿ ಈಗಾಗಲೇ ಬರದ ಭೀಕರತೆ ಕಣ್ಣಿಗೆ ಕಾಣುತ್ತಿದ್ದು, ನವಲಗುಂದ ತಾಲೂಕಿನಲ್ಲಿ ಮಳೆಗಾಲದಲ್ಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ.

ಅನಾಥ ಜಿಲ್ಲೆಗಳು: ಸರಾಸರಿ ವಾಡಿಕೆಗಿಂತ ಶೇ. 40ರಿಂದ 50 ರಷ್ಟು ಮಳೆ ಕೊರತೆಯಿಂದಾಗಿ ಬಿತ್ತಿದ ಬೆಳೆಯಲ್ಲಿ ಶೇ. 40 ರಷ್ಟು ನಾಶವಾಗಿವೆ. ಆರು  ವಾರಗಳಿಂದ ಬರಗಾಲ ಪರಿಸ್ಥಿತಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳನ್ನು ಆವರಿಸಿದೆ. ಇಂಥ ಸ್ಥಿತಿಯಲ್ಲಿ ಕಂದಾಯ ಸಚಿವರು ಒಂದು ಸುತ್ತು ಹಾಕಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಹೊರತು ಪಡಿಸಿದರೆ ಜನತೆಗೆ ನೆರವಾಗುವ ಯಾವುದೇ ಕಾರ್ಯಗಳು ಆಯಾ ಜಿಲ್ಲೆಗಳಲ್ಲಿ ನಡೆಯುತ್ತಿಲ್ಲ. 

ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಹೊರಗಿನವರು ಜಿಲ್ಲಾ ಉಸ್ತುವಾರಿ ವಹಿಸಿದ್ದರಿಂದ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದ್ದು, ಅಲ್ಲಿನ ಜನತೆಗೆ ಅನಾಥಪ್ರಜ್ಞೆ ಕಾಡುತ್ತಿದೆ. ಕನಿಷ್ಠ ಪಕ್ಷ ಈವರೆಗೆ ಬರಗಾಲದಿಂದ ಎಷ್ಟು ಬೆಳೆ ಹಾನಿಯಾಗಿದೆ, ಎಷ್ಟು ಜನರಿಗೆ ಉದ್ಯೋ ಗವಿಲ್ಲ, ಎಷ್ಟು ಕುಟುಂಬಗಳು ಉದ್ಯೋಗ ಅರಸಿ ಗುಳೆ ಹೋಗಿವೆ, ತಕ್ಷಣಕ್ಕೆ ಯಾವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಚಿಂತನೆಯನ್ನೂ ಅಧಿಕಾರಿ ಗಳು ಮಾಡಿಲ್ಲ ಎನ್ನುವ ಮಾಹಿತಿ ಇದೆ. ಬರಗಾಲ ಕುರಿತು ಯಾವುದೇ ಮಾಧ್ಯಮ ಪ್ರತಿನಿಧಿಗಳು ಮಾಹಿತಿ ಕೇಳಿದರೂ ಅಂದಾಜು ಲೆಕ್ಕದಲ್ಲಿ ಮತ್ತು ಹಾರಿಕೆ ರೀತಿಯಲ್ಲಿ ಉತ್ತರ ಬರುತ್ತಿವೆಯೇ ಹೊರತು ಖಚಿತತೆ ಯಾರಿಂದಲೂ ಸಿಗುತ್ತಿಲ್ಲ.

click me!