KRS ನಿಂದ ಹರಿದ ದಾಖಲೆ ನೀರು : ಸಾಕೆನ್ನುವ ಸ್ಥಿತಿ ತಮಿಳುನಾಡಿಗೆ

By Web DeskFirst Published Aug 27, 2018, 9:29 AM IST
Highlights

ಈ ಬಾರಿ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು ಇದರಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಇದೀಗ ಕೆಆರ್ ಎಸ್ ನಿಂದ ತಮಿಳುನಾಡಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ. 

ಮಂಡ್ಯ : ಈ ಬಾರಿ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಎಲ್ಲಾ ಡ್ಯಾಂಗಳೂ ಸಂಪೂರ್ಣ ಭರ್ತಿ ಯಾಗಿವೆ.  ಕೆಆರ್ ಎಸ್ ಡ್ಯಾಂನಲ್ಲಿಯೂ ಕೂಡ ಹೆಚ್ಚಿನ ನೀರು ಸಂಗ್ರಹವಾಗಿದ್ದು, ಇದರಿಂದ ದಾಖಲೆ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ.   

ತಮಿಳುನಾಡಿಗೆ  86 ವರ್ಷಗಳ‌ ಇತಿಹಾಸದಲ್ಲಿ ಕೆ ಆರ್ ಎಸ್ ಜಲಾಶಯದಿಂದ ದಾಖಲೆ‌ ಪ್ರಮಾಣದ ನೀರು ಹರಿದಿದೆ. ಕೆ ಆರ್ ಎಸ್ ನಿಂದ 149.50 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಇನ್ನು ಕಬಿನಿ ಜಲಾಶಯದಿಂದಲೂ ಕೂಡ 161.04 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. 

ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರನ್ನು ಹರಿಸುವಂತೆ‌ ಸುಪ್ರೀಂ ಕೋರ್ಟ್ ಆದೇಶ ನಿಡಿತ್ತು, ಈ ಬಾರಿ ಜೂನ್ ತಿಂಗಳಿನಲ್ಲಿ 9.23 ಟಿಎಂಸಿ, ಜುಲೈ ತಿಂಗಳಿನಲ್ಲಿ 31.93 ಟಿಎಂಸಿ,  ಆಗಸ್ಟ್ ತಿಂಗಳಿನಲ್ಲಿ 46.16 ಟಿಎಂಸಿ ನೀರು ಬಿಡಲು‌ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 

ಆದರೆ ಈ ಬಾರಿ ಕೇವಲ ಮೂರು ತಿಂಗಳಿನಲ್ಲಿಯೇ 310.549 ಟಿಎಂಸಿ ನೀರು ಹರಿಸಲಾಗಿದೆ. ಕೆ ಆರ್ ಎಸ್ ‌ಹಾಗೂ ಕಬಿನಿ ಜಲಾಶಯಗಳಿಂದ 310.549 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗಿದೆ. ಇದರಿಂದ ಮೆಟ್ಟೂರು ಜಲಾಶಯ ಆಗಸ್ಟ್‌ ತಿಂಗಳಿನಲ್ಲಿಯೇ ಮೂರು ಬಾರಿ ಭರ್ತಿಯಾಗಿದ್ದು, ತಮಿಳುನಾಡು ಉಳಿದ ನೀರನ್ನ ಸಮುದ್ರಕ್ಕೆ ಹರಿಸುತ್ತಿದೆ ಎನ್ನಲಾಗಿದೆ.  

ಇತ್ತ ಕಾವೇರಿಗೆ ಮೇಕೆದಾಟು ಬಳಿ‌ ಮತ್ತೊಂದು ಡ್ಯಾಂ ನಿರ್ಮಿಸಿ ಪೋಲಾಗುವ ನೀರನ್ನು ಶೇಕರಿಸುವಂತೆ ರಾಜ್ಯದ ಹೋರಾಟಗಾರರ ಒತ್ತಾಯ ಮಾಡುತ್ತಿದ್ದಾರೆ.

click me!