
ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಆದಾಯ ಮಿತಿ-ಕೆನೆಪದರ ನಿಗದಿ ಮಾಡಿರುವ ಪರಿಣಾಮ ಸರ್ಕಾರದ ಬಹುನಿರೀಕ್ಷಿತ ಲ್ಯಾಪ್‌ಟಾಪ್ ನೀಡುವ ಯೋಜನೆ ಜಾರಿ ಕಷ್ಟವಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಸಿಟ್ಟಾಗಿರುವ ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ನೋಟಿಸ್ ಜಾರಿಗೊಳಿಸಿ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರದ ಜನಪ್ರಿಯ ಲ್ಯಾಪ್‌ಟಾಪ್ ಯೋಜನೆಗೆ ಇದೇ ಮೊದಲ ಬಾರಿಗೆ ಫಲಾನುಭವಿಗಳಿಗೆ ಆದಾಯ ಮಿತಿ ನಿಗದಿ ಮಾಡಲಾಗಿದೆ. ಅಂದರೆ ಸರ್ಕಾರ ನೀಡುವ ಲ್ಯಾಪ್‌ಟಾಪ್ ಪಡೆಯುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು. ಆದರೆ ಆದಾಯ ಪ್ರಮಾಣ ಪತ್ರ ರೂ.2.5 ಲಕ್ಷಕ್ಕೆ ಸಿಗುವುದು ಕಷ್ಟವಾಗಿದ್ದು, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಲಭಿಸುವುದೂ ದುಸ್ತರವಾಗುತ್ತಿದೆ.
ಫಲಾನುಭವಿಗಳ ಹುಡುಕಾಟ: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಕ್ಕೇ ಸರ್ಕಾರ ನಿಗದಿ ಮಾಡಿರುವ ಕೌಟುಂಬಿಕ ಆದಾಯ ಮಿತಿ ರೂ.6 ಲಕ್ಷ. ಆದರೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಪಡೆಯಲು ರೂ.2.5 ಲಕ್ಷ ನಿಗದಿ ಮಾಡಿರುವುದು ತುಂಬಾ ಆಶ್ಚರ್ಯವಾಗಿದೆ. ಈ ರೀತಿ ಆದಾಯ ನಿಗದಿ ಮಾಡುವ ಹಿಂದಿನ ತರ್ಕ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ವಾರ್ಷಿಕ ಆದಾಯ ರೂ.2.5 ಲಕ್ಷಕ್ಕೆ ಮಿತಿಗೊಳಿಸಿರುವ ಪರಿಣಾಮ ವಿದ್ಯಾರ್ಥಿಗಳಿಗೆ ಈ ಮಿತಿಯಲ್ಲಿ ಆದಾಯದ ಪತ್ರ ಸಿಗದೆ ಅರ್ಜಿ ಸಲ್ಲಿಸುವುದೇ ಕಷ್ಟವಾಗುತ್ತಿದೆ. ಇದರಿಂದ ಈ ಬಾರಿ ವಿಶೇಷ ಘಟಕ ಯೋಜನೆಯಡಿ 1.5 ಲಕ್ಷ ಪರಿಶಿಷ್ಟಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಮುಂದಾಗಿರುವ ಸರ್ಕಾರಕ್ಕೆ ಫಲಾನುಭವಿಗಳೇ ಸಿಗದಂತಾಗಿದೆ.
ಉನ್ನತ ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಎಸ್‌ಇಪಿಟಿಎಸ್‌ಪಿ ಯೋಜನೆಯಲ್ಲಿ ಅನುದಾನ ಇದ್ದರೂ ವೆಚ್ಚ ಮಾಡದಂತಾಗಿದೆ. ಹೀಗಾಗಿ ಲ್ಯಾಪ್‌ಟಾಪ್ ಪಡೆಯಲು ಏಪ್ರಿಲ್ 27ರಂದೇ ಅರ್ಜಿ ಆಹ್ವಾನಿಸಿದರೂ ವಿದ್ಯಾರ್ಥಿಗಳಿಂದ ನಿರೀಕ್ಷಿತ ರೀತಿಯಲ್ಲಿ ಪ್ರತಿಕ್ರಿಯೆ ಲಭಿಸಿಲ್ಲ. ಆದ್ದರಿಂದ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಯೋಜನೆ ಜಾರಿ ವಿಳಂಬಕ್ಕೆ ಕಾರಣವೇನು ಎಂದು ಎಲ್ಲಾ 68 ಕಾಲೇಜುಗಳ ಪ್ರಾಂಶುಪಾಲರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಸುತ್ತೋಲೆ, ನೆನಪೋಲೆ ಮತ್ತು ಮೊಬೈಲ್ ಸಂದೇಶಗಳ ಮೂಲಕ ಸಾಕಷ್ಟು ಬಾರಿ ತಿಳಿಸಿದ್ದಾಗ್ಯೂ ಅರ್ಹ ವಿದ್ಯಾರ್ಥಿಗಳ ಸಂಖ್ಯೆಯನ್ನು ಇನ್ನೂ ಏಕೆ ಅಂತಿಮಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ. ಸರ್ಕಾರದ ಮಹಾತ್ವಾಕಾಂಕ್ಷೆಯ ಈ ಯೋಜನೆ ಜಾರಿಯಾ ಗದಿರುವುದಕ್ಕೆ, ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆಯಾಗದಿರುವುದಕ್ಕೆ ನಿಮ್ಮ ಉದಾಸೀನವೇ ಕಾರಣ. ಆದ್ದರಿಂದ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಕೇಳಿದ್ದಾರೆ.
ಆದಾಯ ಮಿತಿಗೆ ಕೇಂದ್ರವೇ ಪರಿಹಾರ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಈ ವರ್ಷ 1.5 ಲಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ನಿರ್ಧರಿಸಲಾಗಿದೆ. ಅದರಲ್ಲೂ ಸರ್ಕಾರಿ ಕಾಲೇಜುಗಳಲ್ಲಿ 12ನೇ ತರಗತಿ ನಂತರ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಸಿದ್ಧತೆ ನಡೆಸಲಾಗಿದೆ.
ಈ ಸಮಸ್ಯೆ ನಿವಾರಿಸಲು ವಿದ್ಯಾರ್ಥಿಗಳ ಆದಾಯ ಮಿತಿಯನ್ನು ಹೆಚ್ಚು ಮಾಡಬೇಕಾಗುತ್ತದೆ. ಆದರೆ 10ನೇ ತರಗತಿ ನಂತರದ ವಿದ್ಯಾರ್ಥಿಗಳ ಆದಾಯ ಮಿತಿ ಬಗ್ಗೆ ಮಾರ್ಗಸೂಚಿಗಳನ್ನು ಬದಲಿಸುವ ಅಧಿಕಾರ ಇರುವುದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ಮಾತ್ರ. ಈ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳೂ ಕೇಂದ್ರವನ್ನು ಒತ್ತಾಯ ಮಾಡಿವೆ. ಆದರೆ ಕೇಂದ್ರ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.