ಸಂಕ್ರಾಂತಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ಇಲ್ಲ..

By Suvarna Web DeskFirst Published Jan 14, 2018, 11:04 AM IST
Highlights

ಸುಗ್ಗಿ ಹಬ್ಬ ಸಂಕ್ರಾಂತಿ ಆಚರಣೆ ರಾಜಧಾನಿಯಲ್ಲಿ ನಡೆದಿದೆ. ಧಾನ್ಯಲಕ್ಷ್ಮಿ ಮನೆಗೆ ಬರುವ ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬಕ್ಕೆ ಮಾರುಕಟ್ಟೆಯೂ ರಂಗೇರಿದ್ದು, ಭರ್ಜರಿ ವಹಿವಾಟು ಜರುಗುತ್ತಿದೆ.

ಬೆಂಗಳೂರು (ಜ.14): ಸುಗ್ಗಿ ಹಬ್ಬ ಸಂಕ್ರಾಂತಿ ಆಚರಣೆ ರಾಜಧಾನಿಯಲ್ಲಿ ನಡೆದಿದೆ. ಧಾನ್ಯಲಕ್ಷ್ಮಿ ಮನೆಗೆ ಬರುವ ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬಕ್ಕೆ ಮಾರುಕಟ್ಟೆಯೂ ರಂಗೇರಿದ್ದು, ಭರ್ಜರಿ ವಹಿವಾಟು ಜರುಗುತ್ತಿದೆ.

ಕಳೆದ ವರ್ಷದ ವರಮಹಾಲಕ್ಷ್ಮೀ, ಗಣೇಶ ಚತುರ್ಥಿ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಪದಾರ್ಥಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈ ಬಾರಿ ಕೊಂಚ ಕಡಿಮೆ ದರದಲ್ಲಿ ದೊರೆಯುತ್ತಿರುವುದು ಜನಸಾಮಾನ್ಯರಲ್ಲೂ ನಿರಾಳತೆ ಮೂಡಿಸಿದೆ. ಸೋಮವಾರ ಸಂಕ್ರಾಂತಿ ಹಬ್ಬ ಬಂದಿರುವುದರಿಂದ ವಾರಾಂತ್ಯ ದಿನವಾದ ಭಾನುವಾರ ಉತ್ತಮ ವ್ಯಾಪಾರವಾಗುವ ನಿರೀಕ್ಷೆ ವ್ಯಾಪಾರಿಗಳದ್ದು.

ಹಬ್ಬದ ಅಂಗವಾಗಿ ಹಲವು ಮಾರುಕಟ್ಟೆಗಳಲ್ಲಿ ಹಣ್ಣು-ಹೂವು, ತರಕಾರಿ, ವಿವಿಧ ಬಣ್ಣಗಳ ಸಕ್ಕರೆ ಅಚ್ಚು, ಎಳ್ಳು-ಬೆಲ್ಲಗಳ ಮಿಶ್ರಣ, ಕುಸುರಿ ಕಾಳುಗಳ ವ್ಯಾಪಾರ ಜೋರಾಗಿದೆ. ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಹಬ್ಬದ ವಹಿವಾಟು ಚುರುಕು ಗೊಂಡಿದೆ. ಪೂಜಾ ಸಾಮಾಗ್ರಿಗಳು, ಹಣ್ಣು-ತರಕಾರಿ ಗಳು ಸೇರಿದಂತೆ ವಿವಿಧ ಪದಾರ್ಥಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿದ್ದು, ಶನಿವಾರವೂ ಅಂಗಡಿಗಳು ಗ್ರಾಹಕರಿಂದ ಭರ್ತಿಯಾಗಿದ್ದವು. ಗಾಂಧಿ ಬಜಾರ್, ಜಯನಗರ, ಮಲ್ಲೇಶ್ವರ, ವಿಜಯನಗರ, ಮೈಸೂರು ರಸ್ತೆ ಸೇರಿದಂತೆ ಎಲ್ಲೆಡೆಯೂ ವ್ಯಾಪಾರ ಕಳೆಕಟ್ಟಿದೆ.

ಸುಗ್ಗಿ ಹಬ್ಬಕ್ಕಾಗಿ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳನ್ನು ಕೆಲವರು ಮನೆಯಲ್ಲಿಯೇ ತಯಾರಿಸಿದ್ದರೆ, ಕೆಲವರು ಅಂಗಡಿಗಳಲ್ಲಿ ಸಿಗುವ ಎಳ್ಳು-ಬೆಲ್ಲದ ಮೊರೆ ಹೋಗಿದ್ದಾರೆ. ಎಳ್ಳು-ಬೆಲ್ಲಗಳ ರೆಡಿಮೇಡ್ ಪೊಟ್ಟಣಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಮಿಶ್ರಣಗೊಳಿಸಿದ ಎಳ್ಳು-ಬೆಲ್ಲ ಕೆ.ಜಿ.ಗೆ 140-160, 250 ಗ್ರಾಂ. ಜೀರಿಗೆ ಮಿಠಾಯಿ ಪೊಟ್ಟಣ 30, ಎಳ್ಳು 30-50, ಸಕ್ಕರೆ ಅಚ್ಚು 30, ಬೆಲ್ಲದ ಚೂರು 30, ಹುರಿಕಡಲೆ 30, ಉಂಡೆ ಕೊಬ್ಬರಿ ಕೆ.ಜಿ. 160-180, 250 ಗ್ರಾಂ. ಕತ್ತರಿಸಿದ ಕೊಬ್ಬರಿ 100-130, ಸಕ್ಕರೆ ಅಚ್ಚು ಕೆ.ಜಿ.ಗೆ 120ಕ್ಕೆ ಮಾರಾಟವಾಗುತ್ತಿವೆ.

ಇನ್ನು ಸೇವಂತಿ ಒಂದು ಮಾರು 60- 70, ಕನಕಾಂಬರ ಮೊಳಕ್ಕೆ 30ಕ್ಕೆ ಖರೀದಿಯಾಗುತ್ತಿದೆ. ಹಬ್ಬಕ್ಕೆ ಅಗತ್ಯವಾದ ವಸ್ತುಗಳು ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ಎಳ್ಳುಬೆಲ್ಲ ಹಂಚಲು ಬಳಸುವ ವಿವಿಧ ವಿನ್ಯಾಸದ ಚೀಲಗಳು, ಅಲಂಕಾರಿಕ ಡಬ್ಬಿಗಳು, ಪ್ಲೇಟ್ಸ್, ಕುಡಿಕೆಗಳು, ಸಾಂಪ್ರದಾಯಿಕ ಹಾಗೂ ಕಾರ್ಟೂನ್, ಹೂವು-ಹಣ್ಣು, ಪ್ರಾಣಿಗಳು ಸೇರಿದಂತೆ ವಿವಿಧ ವಿನ್ಯಾಸದ ಸಕ್ಕರೆ ಅಚ್ಚುಗಳ ಮೌಲ್ಡ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನೊಂದೆಡೆ ಬೇಕರಿಗಳಲ್ಲೂ ಸಿಹಿ ತಿಂಡಿಗಳಿಗೆ ಬಹುಬೇಡಿಕೆ ಕುದುರಿದೆ. ಸಂಕ್ರಾಂತಿ ಪ್ರಯುಕ್ತ ಆನ್‌ಲೈನ್ ಮಾರುಕಟ್ಟೆಗಳು ಗ್ರಾಹಕರಿಗೆ ಹಲವು ರಿಯಾಯಿತಿ ಘೋಷಿಸಿವೆ. ಎಚ್ಚರಿಕೆ ಅಗತ್ಯ: ಕಡಿಮೆ ಬೆಲೆಯ ಸಕ್ಕರೆ, ಬಣ್ಣದಿಂದ ತಯಾರಿಸಿದ ಅಚ್ಚು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಬಣ್ಣದ ಅಚ್ಚುಗಳ ಮಾರಾಟ ನಿಷೇಧಿಸ ಲಾಗಿದೆ.

click me!