ಗಣೇಶ ಮೂರ್ತಿ ಕೂರಿಸೋಕು ಈ ಬಾರಿ ನಿಯಮ : ತಪ್ಪಿದ್ರೆ ಕ್ರಮ

Published : Aug 25, 2018, 08:36 AM ISTUpdated : Sep 09, 2018, 08:42 PM IST
ಗಣೇಶ ಮೂರ್ತಿ ಕೂರಿಸೋಕು ಈ ಬಾರಿ ನಿಯಮ : ತಪ್ಪಿದ್ರೆ ಕ್ರಮ

ಸಾರಾಂಶ

ಈ ಬಾರಿ ಗಣೇಶ ಚತುರ್ಥಿಯಂದು ಗಣೇಶ ಮೂರ್ತಿಗಳನ್ನು ಕೂರಿಸಲು ನಿಯಮ ಜಾರಿ ಮಾಡಲಾಗುತ್ತಿದೆ. ನಿಯಮಗಳನ್ನು ತಪ್ಪಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ. 

ಬೆಂಗಳೂರು :  ಗಣೇಶ ಚತುರ್ಥಿ ಹತ್ತಿರವಾಗುತ್ತಿದೆ, ನಿಮ್ಮ ಏರಿಯಾದಲ್ಲೂ ಗಣೇಶನನ್ನು ಕೂರಿಸಲು ಯೋಚಿಸುತ್ತಿದ್ದೀರಾ, ಹಾಗಾದರೆ ಸುಂದರ  ಗಣೇಶ ಮೂರ್ತಿಯನ್ನು ಕಾಯ್ದಿರಿಸುವಾಗ ಎಚ್ಚರ ಅಪ್ಪಿತಪ್ಪಿಯೂ ಪಿಒಪಿ ಗಣೇಶಗಳನ್ನು ಖರೀದಿಸಬೇಡಿ. ಖರೀದಿಸಿದರೆ ಅಥವಾ ಕಾಯ್ದಿ ರಿಸಿದರೆ ಬಿಬಿಎಂಪಿಯಿಂದ ಗಣೇಶನ ಪ್ರತಿಷ್ಠಾಪನೆಗೆ ಅನುಮತಿಯೇ ಸಿಗುವುದಿಲ್ಲ!

ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿ ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶಗಳ ಪ್ರತಿ ಷ್ಠಾಪನೆಯನ್ನು ಸಂಪೂರ್ಣ ನಿಯಂತ್ರಿಸಲು ಮುಂದಾಗಿದೆ. ಇದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸಲು ಅನುಮತಿ ಕೋರಿ ಬರುವ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ‘ಪಿಒಪಿ ಗಣೇಶಗಳನ್ನು ಕೂರಿಸಬಾರದು’ ಎಂಬ ಷರತ್ತಿನೊಂದಿಗೆ ಅನುಮತಿ ನೀಡಲು ಗಂಭೀರ ಚಿಂತನೆ ನಡೆಸಿದೆ. ಅಷ್ಟೇ ಅಲ್ಲ, ಒಂದು ವೇಳೆ ಈ ಷರತ್ತು ಮೀರಿ ಪಿಒಪಿ ಗಣೇಶ ಅಥವಾ ರಾಸಾಯನಿಕ ಬಣ್ಣ ಲೇಪಿತ ಗಣೇಶಗಳನ್ನು ಪ್ರತಿಷ್ಠಾಪಿಸಿದರೆ ದಂಡ ವಿಧಿಸಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆಲೋಚನೆ ನಡೆಸಿದೆ.

ನಗರದಲ್ಲಿ ಗಣೇಶ ಹಬ್ಬ ಹಾಗೂ ನಂತರದ ಒಂದು ತಿಂಗಳ ಕಾಲ ಸಾರ್ವಜನಿಕ ಜಾಗಗಳಲ್ಲಿ ಕೂರಿಸಲಾಗುವ ಗಣೇಶ ಮೂರ್ತಿಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿರುವಂತೆ ಕ್ರಮ ವಹಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜತೆಗೂಡಿ ಬಿಬಿಎಂಪಿ ಹಲವು ಮಾರ್ಗಸೂಚಿಗಳನ್ನು ರೂಪಿಸತೊಡಗಿದೆ. ಈ ಮಾರ್ಗಸೂಚಿಗಳಲ್ಲಿ ಪ್ರಮುಖವಾಗಿ ಗಣೇಶ ಮೂರ್ತಿ ಕೂರಿಸಲು ಅನುಮತಿ ನೀಡುವಾಗ ಸಂಘ ಸಂಸ್ಥೆಯವರು ತಾವು ಕೂರಿಸುತ್ತಿರುವುದು ‘ಪಿಒಪಿ ಗಣೇಶ ಅಲ್ಲ’ ಎಂಬ ಖಾತರಿ ಪತ್ರ ಪಡೆದುಕೊಂಡು ಅನುಮತಿ ನೀಡಲು ಚಿಂತನೆ ನಡೆಸಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

2016 ರಲ್ಲೇ ಸರ್ಕಾರ ಪರಿಸರಕ್ಕೆ ಮಾರಕವಾದ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ, ಗಣೇಶ ಮೂರ್ತಿಗಳ ತಯಾರಕರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲ ವರ್ಷಗಳಿಂದ ಮಾರಾಟವಾಗದೆ ಉಳಿದಿರುವ ಲಕ್ಷಾಂತರ ರು. ಮೌಲ್ಯದ ಗಣೇಶ ಮೂರ್ತಿಗಳು ನಮ್ಮ ಬಳಿ ಇವೆ. ಪಿಒಪಿ ಗಣೇಶ ನಿಷೇಧಿಸಿದರೆ ಇವುಗಳ ತಯಾರಿಕೆಗೆ ನಾವು ಮಾಡಿರುವ ವೆಚ್ಚ ಭರಿಸುವವರು ಯಾರು? ಇದರಿಂದ ನಮಗೆ ನಷ್ಟವಾಗುತ್ತದೆ. ಹಾಗಾಗಿ ವಿನಾಯಿತಿ ನೀಡುವಂತೆ ಕೋರಿದ್ದರಿಂದ ಕಳೆದ ಎರಡು ವರ್ಷಗಳ ಕಾಲ ವಿನಾಯಿತಿ ನೀಡಲಾಗಿತ್ತು. 

ಆದರೆ, ಈ ವರ್ಷ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ಮುಂದಾಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಎಲ್ಲ ಮಹಾನಗರ ಪಾಲಿಕೆಗಳಿಗೂ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳು ಈ ಬಾರಿ ಪಿಒಪಿ ಗಣೇಶಗಳ ತಯಾರಿಕೆ, ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ನಿಷೇಧಿಸಿ ಪರಿಸರ ಸ್ನೇಹಿ ಗಣೇಶಗಳನ್ನು ಮಾತ್ರ ಕೂರಿಸಬೇಕೆಂದು ಆದೇಶ ಹೊರಡಿಸಿವೆ. ಇದೀಗ ಬಿಬಿಎಂಪಿ ಕೂಡ ಬೆಂಗಳೂರಿನಲ್ಲಿ ಪಿಒಪಿ ಗಣೇಶಗಳ ತಯಾರಿಕೆ, ಮಾರಾಟ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಸಾರ್ವಜನಿಕವಾಗಿ ಪರಿಸರಕ್ಕೆ ಮಾರಕವಾದ ಗಣೇಶಗಳನ್ನು ಪ್ರತಿಷ್ಠಾಪಿಸುವುದನ್ನು ತಡೆಯಲು ಹೊರಟಿದೆ. ಇದಕ್ಕಾಗಿ ಸಾರ್ವಜನಿಕವಾಗಿ ಕೂರಿಸುವ ಗಣೇಶಗಳು ಪಿಓಪಿ ರಹಿತವಾಗಿದ್ದರೆ ಮಾತ್ರ ಅನುಮತಿ ನೀಡಲು ಚಿಂತನೆ ನಡೆಸಿದೆ.

5 ಅಡಿಯ ಮಿತಿ
ಬಿಬಿಎಂಪಿ ಪಿಒಪಿ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ತಯಾರಿಕೆ, ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಕ್ಕೆ ನಿರ್ಧರಿಸಿದೆ. ಅಲ್ಲದೆ, ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ನೀಡಿರುವ ನಿರ್ದೇಶನದಂತೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಮೂರ್ತಿಗಳಿಗೆ ಗರಿಷ್ಠ 5 ಅಡಿಯ ಮಿತಿ ಗೊತ್ತುಪಡಿಸಲು ಮುಂದಾಗಿದೆ.

ಮಣ್ಣಿನ ಮೂರ್ತಿಗಳು ಹೆಚ್ಚು ತೂಕವಿರುವುದರಿಂದ ಕೆಲವೊಮ್ಮೆ ಮೂರ್ತಿಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಬೃಹತ್ ಮೂರ್ತಿಗಳನ್ನು ಸಣ್ಣಪುಟ್ಟ ಪುಷ್ಕರಣಿ, ಕಲ್ಯಾಣಿ ಇಲ್ಲವೇ ತಾತ್ಕಾಲಿಕ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವುದು ಸವಾಲಾಗುತ್ತಿದೆ. ಹೀಗಾಗಿ, ಎತ್ತರವನ್ನು ಸೀಮಿತಗೊಳಿಸಲಾಗುವುದು. ಈಗಾಗಲೇ ಮೂರ್ತಿಗಳ ತಯಾರಿಕರಿಗೂ ಮಣ್ಣಿನ ಮೂರ್ತಿ ತಯಾರಿಕೆ ವೇಳೆ ಚಿಕ್ಕ ಮೂರ್ತಿಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒಂದು ತಿಂಗಳ ಕಾಲಾವಕಾಶವನ್ನಷ್ಟೇ ನೀಡುವಂತೆ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಹಾಗಾಗಿ ನಗರದಲ್ಲೂ ಹಬ್ಬ ಮುಗಿದ ಒಂದು ತಿಂಗಳ ಕಾಲ ಮಾತ್ರ ಕಾಲಾವಕಾಶ ನೀಡಲಾಗುವುದು. ನಂತರ ಗಣೇಶ ವಿಸರ್ಜನೆಗೆ ಅವಕಾಶ ನೀಡಿದ ಎಲ್ಲ ಕೆರೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಹಾಗಾಗಿ ತಿಂಗಳ ನಂತರ ಅವಕಾಶ ನೀಡದಿರಲು ಚರ್ಚೆ ನಡೆಯುತ್ತಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಲಿಂಗರಾಜು ಕೋರಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಟ್ರಂಪ್ ಮಾತ್ರವಲ್ಲ, ಕ್ಲಿಂಟನ್, ಬಿಲ್ ಗೇಟ್ಸ್ ಕೂಡ..' ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಫೋಟೋಗಳು ರಿಲೀಸ್
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!