ಮುಸ್ಲಿಂ ಬ್ರದರ್‌ಹುಡ್‌ ರೀತಿ ಬಿಜೆಪಿ, ಆರೆಸ್ಸೆಸ್‌ : ರಾಹುಲ್

By Web DeskFirst Published Aug 25, 2018, 8:04 AM IST
Highlights

ಭಾರತದಲ್ಲಿ ಆರೆಸ್ಸೆಸ್‌-ಬಿಜೆಪಿಗಳು ಸರ್ಕಾರಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿವೆ. ಆರೆಸ್ಸೆಸ್‌-ಬಿಜೆಪಿ ನಡೆಗಳು ಯಾವ ರೀತಿ ಇವೆಯೆಂದರೆ ಅರಬ್‌ ರಾಷ್ಟ್ರಗಳಲ್ಲಿನ ಕೋಮುವಾದಿ ಪಕ್ಷವಾದ ಮುಸ್ಲಿಂ ಬ್ರದರ್‌ಹುಡ್‌ ಪಕ್ಷದಂತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ/ಬರ್ಲಿನ್‌ :  ಕಾಂಗ್ರೆಸ್‌ ಪಕ್ಷ ದೇಶದ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಆದರೆ ಬಿಜೆಪಿ-ಆರ್‌ಎಸ್‌ಎಸ್‌ಗಳು ಬರೀ ದ್ವೇಷ ಹುಟ್ಟುಹಾಕುವ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿದೇಶಿ ನೆಲದಲ್ಲಿ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರೆಸಿದ್ದಾರೆ.

ಇದಲ್ಲದೆ, ‘ಭಾರತದಲ್ಲಿ ಆರೆಸ್ಸೆಸ್‌-ಬಿಜೆಪಿಗಳು ಸರ್ಕಾರಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿವೆ. ಆರೆಸ್ಸೆಸ್‌-ಬಿಜೆಪಿ ನಡೆಗಳು ಯಾವ ರೀತಿ ಇವೆಯೆಂದರೆ ಅರಬ್‌ ರಾಷ್ಟ್ರಗಳಲ್ಲಿನ ಕೋಮುವಾದಿ ಪಕ್ಷವಾದ ಮುಸ್ಲಿಂ ಬ್ರದರ್‌ಹುಡ್‌ ಪಕ್ಷದಂತಿದೆ’ ಎಂದು ಪ್ರಹಾರ ನಡೆಸಿದ್ದಾರೆ. ಮುಸ್ಲಿಂ ಬ್ರದರ್‌ಹುಡ್‌ ಮೇಲೆ ಉಗ್ರವಾದಿ ಚಟುವಟಿಕೆ ಆರೋಪವಿದೆ.

Latest Videos

ಇದೇ ವೇಳೆ ಡೋಕ್ಲಾಂ ವಿವಾದ ಪ್ರಸ್ತಾಪಿಸಿರುವ ಅವರು, ‘ಡೋಕ್ಲಾಂನಲ್ಲಿ ಇನ್ನೂ ಚೀನೀ ಸೈನಿಕರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವಲ್ಪ ಎಚ್ಚರ ವಹಿಸಿದ್ದರೆ ಡೋಕ್ಲಾಂ ವಿವಾದ ತಪ್ಪಿಸಬಹುದಿತ್ತು’ ಎಂದಿದ್ದಾರೆ. ರಾಹುಲ್‌ರ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿದೆ.

ಮೋದಿ ಮೇಲೆ ವಾಗ್ದಾಳಿ: ಜರ್ಮನಿಯ ಬರ್ಲಿನ್‌ನಲ್ಲಿ ಸಾಗರೋತ್ತರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ ರಾಹುಲ್‌, ‘ಕಾಂಗ್ರೆಸ್‌ ಪಕ್ಷ ವಿವಿಧತೆಯಲ್ಲಿ ಏಕತೆ ತಂದಿದೆ. ಬಿಜೆಪಿ-ಆರೆಸ್ಸೆಸ್‌ ದ್ವೇಷ ಪಸರಿಸುತ್ತಿವೆ. ದೇಶದಲ್ಲಿ ಬರೀ ಉದ್ದ ಭಾಷಣಗಳಾಗುತ್ತಿವೆ. ಆದರೆ ಇಷ್ಟಾಗ್ಯೂ ದೇಶದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರೆದಿವೆ. ಯುವಕರಿಗೆ ಭವಿಷ್ಯ ಕಾಣದಾಗಿದೆ’ ಎಂದು ಕಿಡಿಕಾರಿದರು.

ಇದೇ ವೇಳೆ ಡೋಕ್ಲಾಂ ವಿವಾದವನ್ನೂ ಪ್ರಸ್ತಾಪಿಸಿದ ಅವರು, ‘ಡೋಕ್ಲಾಂ ಪ್ರದೇಶವನ್ನು ಚೀನೀಯರು ಆಕ್ರಮಿಸಿಕೊಂಡಿದ್ದು ಸಣ್ಣ ವಿಷಯವಲ್ಲ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ವಿವಾದ ತಪ್ಪಿಸಬಹುದಿತ್ತು. ನಿಜ ಏನೆಂದರೆ ಇನ್ನೂ ಡೋಕ್ಲಾಂನಲ್ಲಿ ಚೀನೀ ಸೈನಿಕರಿದ್ದಾರೆ’ ಎಂದು ದೂರಿದರು.

ನಾನು ಯಾರನ್ನೂ ದ್ವೇಷಿಸಲ್ಲ:  ಇನ್ನು ಮೋದಿ ಅವರನ್ನು ಸಂಸತ್ತಿನಲ್ಲಿ ಅಪ್ಪಿಕೊಂಡಿದ್ದನ್ನು ಪ್ರಸ್ತಾಪಿಸಿದ ಅವರು, ‘ಮೋದಿ ನನ್ನ ಮೇಲೆ ಸದಾ ದ್ವೇಷ ಕಾರುತ್ತಾರೆ. ಆದರೆ ನಾನು ಭಾರತೀಯ. ಸಹಜವಾಗೇ ನಾನು ಯಾರನ್ನೂ ದ್ವೇಷಿಸಲ್ಲ’ ಎಂದು ಟಾಂಗ್‌ ನೀಡಿದರು.

ಬಿಜೆಪಿ ಆಕ್ರೋಶ:  ರಾಹುಲ್‌ ಆರೋಪಗಳ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿಕಾರಿದ್ದಾರೆ. ‘ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ಮುಸ್ಲಿಂ ಬ್ರದರ್‌ಹುಡ್‌ ಪಕ್ಷವನ್ನು ಹಲವು ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಬಿಜೆಪಿ ಭಾರತದಲ್ಲಿ ಆಡಳಿತ ಪಕ್ಷವಾಗಿದೆ. ಇಂಥದ್ದರಲ್ಲಿ ನಿಷೇಧಿತ ಪಕ್ಷವೊಂದನ್ನು ಒಂದು ದೇಶದ ಆಡಳಿತ ಪಕ್ಷದೊಂದಿಗೆ ಹೋಲಿಸುವುದು ಸರಿಯೇ? ರಾಹುಲ್‌ ಮತ್ತೆ ತಮ್ಮ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ಅವರು ತಾವೊಬ್ಬ ಜವಾಬ್ದಾರಿಯುತ ವಿಪಕ್ಷದ ಅಧ್ಯಕ್ಷ ಎಂಬುದನ್ನು ಮರೆತಿದ್ದು, ಬರೀ ಮೋದಿ ದ್ವೇಷ ಅನುಸರಿಸುತ್ತಿದ್ದಾರೆ. ಭಾರತಕ್ಕೆ ವಿದೇಶಿ ನೆಲದಲ್ಲಿ ಅವಮಾನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ರಾಹುಲ್‌ ಅವರು ಭಾರತ ಎಂಬ ಆಲೋಚನೆಯ ಸುಪಾರಿ ಹಂತಕನಂತೆ ವರ್ತಿಸುತ್ತಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಆರೆಸ್ಸೆಸ್‌ ಹಿನ್ನೆಲೆ ಇತ್ತು. ರಾಹುಲ್‌ ಗಾಂಧಿ ಅವರು ಆ ಸಂಘಟನೆಯನ್ನು ಇಸ್ಲಾಮಿಕ್‌ ಸಂಘಟನೆ ಜತೆ ಹೋಲಿಕೆ ಮಾಡಿರುವುದನ್ನು ಕ್ಷಮಿಸಲಾಗದು ಎಂದು ಹರಿಹಾಯ್ದಿದ್ದಾರೆ.

click me!