ಗದುಗಿನ 11 ಗ್ರಾಮಗಳಲ್ಲಿ ರುದ್ರಭೂಮಿಯೇ ಇಲ್ಲ-ಸಾವೆಂದರೆ ಬೆಚ್ಚುವ ಜನ

By Suvarna Web DeskFirst Published Nov 21, 2017, 3:08 PM IST
Highlights

ಗದಗ ತಾಲೂಕಿನಲ್ಲಿ ಒಟ್ಟು 58 ಗ್ರಾಮಗಳಿದ್ದು, ಇವುಗಳಲ್ಲಿ 11 ಗ್ರಾಮಗಳಿಗೆ ಸ್ವಾತಂತ್ರ್ಯ ಬಂದು ಅರ್ಧ ಶತಮಾನವೇ ಗತಿಸಿ ಹೋಗಿದ್ದರೂ ಆ ಗ್ರಾಮಗಳಿಗೆ ರುದ್ರಭೂಮಿ ಇಲ್ಲದೇ ಇರುವುದು ದೊಡ್ಡ ದೌರ್ಭಾಗ್ಯದ ಸಂಗತಿ.

ಗದಗ (ನ.21):  ಶವ ಸಂಸ್ಕಾರ ಎನ್ನುವುದು ಪವಿತ್ರ ಕೆಲಸ. ಆದರೆ ಶವ ಸಂಸ್ಕಾರಕ್ಕೆ ಬೇಕಾದ ರುದ್ರಭೂಮಿಯೇ ಆ ಗ್ರಾಮಗಳಲ್ಲಿ ಇಲ್ಲದಿರುವುದರಿಂದಾಗಿ ಮನೆಗಳಲ್ಲಿ ಸಾವು ಸಂಭವಿಸಿದರೆ ಸಾಕು ಭಯ ಬೀಳುವ ವಾತಾವರಣ ಗದಗ ತಾಲೂಕಿನ 11 ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಗದಗ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಇದ್ದು ಇದನ್ನು ಹೋಗಲಾಡಿಸಿ, ಗ್ರಾಮಸ್ಥರಿಗೆ ರುದ್ರಭೂಮಿಯನ್ನು ಕಲ್ಪಿಸುವಲ್ಲಿ ಮುಂದಾಗಬೇಕಾದ ಜನಪ್ರತಿನಿಧಿಗಳು ತಾಲೂಕು ಆಡಳಿತ ವರ್ಗ ಮಾತ್ರ ಆ ಗ್ರಾಮಗಳಲ್ಲಿ ಸ್ಥಳ (ಜಮೀನು) ಸಿಗುತ್ತಿಲ್ಲ ಎನ್ನುವ ಉತ್ತರ ಹೇಳುತ್ತಲೇ ಇರುವುದು ರುದ್ರಭೂಮಿ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಗ್ರಾಮಸ್ಥರಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

58  ಗ್ರಾಮಗಳಿವೆ: ಗದಗ ತಾಲೂಕಿನಲ್ಲಿ ಒಟ್ಟು 58 ಗ್ರಾಮಗಳಿದ್ದು, ಇವುಗಳಲ್ಲಿ 11 ಗ್ರಾಮಗಳಿಗೆ ಸ್ವಾತಂತ್ರ್ಯ ಬಂದು ಅರ್ಧ ಶತಮಾನವೇ ಗತಿಸಿ ಹೋಗಿದ್ದರೂ ಆ ಗ್ರಾಮಗಳಿಗೆ ರುದ್ರಭೂಮಿ ಇಲ್ಲದೇ ಇರುವುದು ದೊಡ್ಡ ದೌರ್ಭಾಗ್ಯದ ಸಂಗತಿ. ಇದು ಗದಗ ತಾಲೂಕು ಕೇಂದ್ರದಲ್ಲಿ ಕುಳಿತಿರುವ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಸಮಸ್ಯೆಯಾಗಿಯೇ ಕಾಣುವುದಿಲ್ಲ, ಆದರೆ ರುದ್ರಭೂಮಿ ಇಲ್ಲದೇ ಇರುವ ಗ್ರಾಮಗಳಲ್ಲಿ ಸಾವುಗಳು ಸಂಭವಿಸಿದಾಗ ಎದುರಾಗುವ ಸಮಸ್ಯೆ ತೀರಾ ಗಂಭೀರವಾಗಿದೆ.

11 ಗ್ರಾಮಗಳಲ್ಲಿ ಇಲ್ಲ: ಗದಗ ತಾಲೂಕಿನ ಹಿರೇ ಹಂದಿಗೋಳ, ನಭಾಪೂರ, ಹಂಗನಕಟ್ಟಿ, ಎಲಿಶಿರೂರ, ಕಬಲಾಯತಕಟ್ಟಿ, ಕಿರಟಗೇರಿ, ಲಿಂಗದಾಳ, ಬೆಳಹೊಡ,ದುಂದೂರ, ಸಂಭಾಪೂರ ಹಾಗೂ ಹಾತಲಗೇರಿ ಈ ಗ್ರಾಮಗಳಲ್ಲಿ ಇಂದಿಗೂ ರುದ್ರಭೂಮಿ ಇಲ್ಲ, ಈ ಗ್ರಾಮಗಳಲ್ಲಿನ ಸಮಸ್ಯೆಯ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ತಹಸೀಲ್ದಾರ ಅಧ್ಯಕ್ಷತೆಯಲ್ಲಿ ಜರುಗುವ ತಾಲೂಕು ಮಟ್ಟದಲ್ಲಿ ಜರುಗುವ ಜಾಗ್ರತ ಸಮಿತಿ ಸಭೆಯಲ್ಲಿ ಚರ್ಚಿಸಿದ್ದರೂ ಇದುವರೆಗೂ ಪರಿಹಾರ ಮಾತ್ರ ಶೂನ್ಯ.

ವಿವರ: ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ 2267 ಜನಸಂಖ್ಯೆಯನ್ನು ಹೊಂದಿದ್ದು, ಈ ಗ್ರಾಮದಲ್ಲಿ ಇದುವರೆಗೂ ರುದ್ರಭೂಮಿ ಇಲ್ಲ, ಇದಕ್ಕಾಗಿ ಯಾವುದೇ ಪ್ರಸ್ತಾವನೆಯೂ ಸಲ್ಲಿಕೆಯಾಗಿಲ್ಲ, ನಭಾಪೂರ ಗ್ರಾಮದಲ್ಲಿ 495 ಜನಸಂಖ್ಯೆ ಇದ್ದು ರುದ್ರಭೂಮಿಗಾಗಿ ಜಮೀನಿನ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಹಂಗನಕಟ್ಟಿ ಗ್ರಾಮದಲ್ಲಿ 1020, ಎಲಿಶಿರೂರ ಗ್ರಾಮದಲ್ಲಿ 2837, ಕಬಲಾಯ ತಕಟ್ಟಿ ಗ್ರಾಮದಲ್ಲಿ 1150 ಜನಸಂಖ್ಯೆ ಇದ್ದು ಈ ಗ್ರಾಮಗಳ ರುದ್ರಭೂಮಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕಿರಟಗೇರಿ ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆ ಇದ್ದು ಇಂದಿಗೂ ರುದ್ರ ಭೂಮಿಗಾಗಿ ಬೇಕಾಗುವ ಸ್ಥಳ ಪರಿಶೀಲನೆ ನಡೆಯುತ್ತಿದೆ. ಲಿಂಗದಾಳ ಗ್ರಾಮದಲ್ಲಿ 5 ಸಾವಿರ, ಬೆಳಹೊಡ ಗ್ರಾಮದಲ್ಲಿ 3500 ಮತ್ತು ದುಂದೂರು ಗ್ರಾಮದಲ್ಲಿ 1560 ಜನಸಂಖ್ಯೆ ಇದ್ದರೂ ರುದ್ರಭೂಮಿ ಇಲ್ಲ, ಸಂಭಾಪುರ ಗ್ರಾಮದಲ್ಲಿ 2500  ಹಾಗೂ ಹಾತಲಗೇರಿ ಗ್ರಾಮದಲ್ಲಿ 2700 ಜನಸಂಖ್ಯೆ ಇದ್ದು, ಈ ಗ್ರಾಮಗಳಿಗೆ ಬೇಕಾಗುವ ರುದ್ರಭೂಮಿಯ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ.

ವರದಿ : ಶಿವಕುಮಾರ ಕುಷ್ಟಗಿ - ಕನ್ನಡಪ್ರಭ

click me!