ಟಿಕೆಟ್ ನೀಡಲು ಯಡಿಯೂರಪ್ಪ ಯಾರು ?

By Suvarna Web DeskFirst Published Nov 21, 2017, 2:16 PM IST
Highlights

ಬಿಜೆಪಿ ರಾಷ್ಟ್ರೀಯ ಮುಖಂಡರು ಟಿಕೆಟ್ ವಿಷಯವಾಗಿ ಸರ್ವೆ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಬಂದವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಮಧ್ಯೆ ಬಿಜೆಪಿ ಟಿಕೆಟ್ ನೀಡಲು ಯಡಿಯೂರಪ್ಪ ಯಾರು? ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಪ್ರಶ್ನಿಸಿದರು.

ಬೈಲಹೊಂಗಲ (ನ.21): ಬಿಜೆಪಿ ರಾಷ್ಟ್ರೀಯ ಮುಖಂಡರು ಟಿಕೆಟ್ ವಿಷಯವಾಗಿ ಸರ್ವೆ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಬಂದವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಮಧ್ಯೆ ಬಿಜೆಪಿ ಟಿಕೆಟ್ ನೀಡಲು ಯಡಿಯೂರಪ್ಪ ಯಾರು? ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಪ್ರಶ್ನಿಸಿದರು. ಸೋಮವಾರ ತಮ್ಮ ನಿವಾಸಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನ.17 ರಂದು ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದಾಗ ಪತ್ರಕರ್ತರು ಬೈಲಹೊಂಗಲ ಮತಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ನಡುವೆ ಟಿಕೆಟ್ ಪೈಪೋಟಿಯಿಂದ ಕಾರ್ಯಕರ್ತರು ಗೊಂದಲದಲ್ಲಿ ಇದ್ದಾರೆ ಎಂದಾಗ ಬಿಎಸ್‌ವೈ ಅವರು ಪ್ರತಿಕ್ರಿಯಿಸಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ, ಶಾಸಕರಾಗಿ ಡಾ. ವಿಶ್ವನಾಥ ಪಾಟೀಲ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರಿಗೆ ಪಕ್ಷ ಅಧಿಕಾರಕ್ಕೆ ಬಂದರೆ ಸೂಕ್ತ ಸ್ಥಾನಮಾನ ಕೊಡುವುದಾಗಿ ತಿಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ ನಮ್ಮ ಮನೆಗೆ ಆಗಮಿಸಿ ಕರ್ನಾಟಕ ನವ ನಿರ್ಮಾಣ ಯಾತ್ರೆಗೆ ಆಗಮಿಸುವಂತೆ ಆಹ್ವಾನ ನೀಡಿದ್ದು ನಿಜ. ಅಲ್ಲದೆ ವಿಸ್ತಾರಕ ಸಭೆ, ಯಾತ್ರೆಯ ಪೂರ್ವಭಾವಿ ಸಭೆಗೆ ಯಾವುದೇ ರೀತಿ ಆಹ್ವಾನ ನೀಡಿರಲಿಲ್ಲ. ಅಲ್ಲದೆ ನನ್ನ ಭಾವಚಿತ್ರ, ಹೆಸರನ್ನು ಪೋಸ್ಟರ್ ಹಾಗೂ ಬ್ಯಾನರ್‌ಗಳಲ್ಲಿ ಬಳಸಿಲ್ಲ. ಇದರಿಂದ ಯಾತ್ರೆಗೆ ಹೋಗಲು ನನಗೆ ಮುಜುಗರವಾಯಿತು ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಿಜೆಪಿ ಸರ್ಕಾರದಲ್ಲಿ ನನಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿಕೆ ನೀಡಿ ನಂತರ ನಡೆದ ಬಹಿರಂಗ ಸಮಾರಂಭದಲ್ಲಿ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ ಎಂದರು. ಸಮಾರಂಭದ ಬ್ಯಾನರ್ ಮತ್ತು ಭಿತ್ತಿ ಪತ್ರಗಳಲ್ಲಿ ನನ್ನ ಪ್ರಸ್ತಾಪ ಇರಲಿಲ್ಲ. ಶಾಸಕ ಡಾ.ವಿಶ್ವನಾಥ ಪಾಟೀಲರು ಇದಕ್ಕೆಲ್ಲ ಹಣ ಖರ್ಚು ಮಾಡಿ ಸಂಘಟನೆ ಮಾಡಿದ್ದಾರೆ.

ಅವರು ಶ್ರಮವಹಿಸಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ನನ್ನ ಪಾತ್ರವೂ ಇದೇ ಎಂದು ತೋರಿಸುವುದು ನನ್ನ ಆತ್ಮಸಾಕ್ಷಿಗೆ ಒಪ್ಪಲಿಲ್ಲ. ಹೀಗಾಗಿ ಪರಿವರ್ತನಾ ಸಮಾರಂಭದಲ್ಲಿ ಪಾಲ್ಗೊಳಲ್ಲಿಲ್ಲ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಬರಲಿರುವ ಬಿಜೆಪಿ ಸರ್ಕಾರದಲ್ಲಿ ಸೂಕ್ತ ಸ್ಥಾನ-ಮಾನ ನೀಡುವುದಾಗಿ ದೂರವಾಣಿಯಲ್ಲಿ ಹೇಳಿಲ್ಲ. ಅಷ್ಟೇ ಅಲ್ಲ ಪರಿವರ್ತನಾ ಸಮಾರಂಭದಲ್ಲೂ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದರು. ಅನೀಲ ಮೆಟಗುಡ್ಡ, ದಯಾನಂದ ಪರಾಳಶೆಟ್ಟಿ, ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಜಗದೀಶ ಮೇಟಿ, ಪ್ರಫುಲ್ಲ ಪಾಟೀಲ ಇದ್ದರು.

click me!