ಸರ್ಕಾರಿ ಜಾಗದಲ್ಲೂ  ‘ವಾಸಿಸುವವನೇ ಒಡೆಯ’

By Suvarna Web DeskFirst Published Nov 21, 2017, 2:40 PM IST
Highlights

ಭೂಕಂದಾಯ ಕಾಯ್ದೆಗೆ ಮತ್ತೊಂದು ತಿದ್ದುಪಡಿ ಮಂಡನೆ | 1979ಕ್ಕಿಂತ ಮುಂಚಿನಿಂದ ವಾಸಿಸುತ್ತಿರುವವರ ಮನೆಗಳು ಸಕ್ರಮ

ವಿಧಾನಸಭೆ: ವಾಸಿಸುವವನೇ ಮನೆಯ ಒಡೆಯ ಉದ್ದೇಶದ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ಮತ್ತೊಂದು ತಿದ್ದುಪಡಿ ತರುವ ಮೂಲಕ ಸರ್ಕಾರಿ ಒಡೆತನದ ಜಾಗವನ್ನೂ ಕಂದಾಯ ಗ್ರಾಮರಹಿತ ಜನವಸತಿಗಳಲ್ಲಿ ಹಾಲಿ ವಾಸವಿರುವವರಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ.

ಸೋಮವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕರ್ನಾಟಕ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕ ಮಂಡಿಸಿದರು. ಈ ತಿದ್ದುಪಡಿ ವಿಧೇಯಕದಲ್ಲಿ 94ಡಿ ಅಧಿನಿಯಮ ಅಳವಡಿಸಲಾಗಿದೆ. ಈ ತಿದ್ದುಪಡಿ ಅನುಸಾರ ಕಂದಾಯ ಗ್ರಾಮವಲ್ಲದ ಅನಧಿಕೃತ ಬಡಾವಣೆಗಳಾದ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ, ವಡ್ಡರಹಟ್ಟಿ, ಕುರುಬರ ಹಟ್ಟಿ, ನಾಯಕರಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿಯಂತಹ ಮತ್ತಿತರ ರಾಜ್ಯದ 58 ಸಾವಿರಕ್ಕೂ ಅಧಿಕ ಜನವಸತಿ ಪ್ರದೇಶಗಳಲ್ಲಿನ ಮನೆಗಳು ಒಂದು ವೇಳೆ ಸರಕಾರಿ ಭೂಮಿಯಾಗಿದ್ದಲ್ಲಿ ಅದನ್ನು ಕೂಡ ಈಗಾಗಲೇ ವಾಸಿಸುತ್ತಿರುವವರಿಗೆ ಷರತ್ತಿಗೆ ಒಳಪಟ್ಟು ವಿತರಿಸಲು, ಅಂದರೆ ಈಗಾಗಲೇ 1979ರ ಪೂರ್ವದಲ್ಲಿ ವಾಸಿಸುತ್ತಿರುವವರ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಷರತ್ತಿನ ಅನುಸಾರ ಈಗಾಗಲೇ ಈ ರೀತಿ ಅನಧಿಕೃತವಾಗಿ ವಾಸಿಸುವವರು ವಾಸದ ಮನೆ ಹಾಗೂ ಅದಕ್ಕೆ ಉಪಭೋಗಕ್ಕೆ ಬಳಸಲು ಹೊಂದಿರುವ ಜಮೀನಿನ ಕುರಿತು ದಾಖಲೆಗಳ ಅರ್ಜಿ ಸಲ್ಲಿಸುವುದು ಕಡ್ಡಾಯ. ಅರ್ಜಿ ಸಲ್ಲಿಸುವ ವ್ಯಕ್ತಿ, ಅಂದರೆ ವಾಸವಾಗಿರುವ ವ್ಯಕ್ತಿ, ಆತ, ಆತನ ಪತ್ನಿ, ಹೆಣ್ಣು ಮಕ್ಕಳು ಅಥವಾ ಅಪ್ರಾಪ್ತ ಗಂಡು ಮಕ್ಕಳ ಹೆಸರಿನಲ್ಲಿ ಯಾವುದೇ ಜಮೀನು ಹೊಂದಿದ್ದರೆ ನಿವೇಶನ ಅಥವಾ ಮನೆ ಮಂಜೂರು ಮಾಡಲಾಗುವುದಿಲ್ಲ. ಮಂಜೂರಾದ ಮನೆ ಅಥವಾ ಜಮೀನನ್ನು ಮುಂದಿನ 15 ವರ್ಷಗಳವರೆಗೆ ಪರಭಾರೆ ಮಾಡಲು ಅವಕಾಶ ಇಲ್ಲ. ಮಂಜೂರಾತಿಯು 4 ಸಾವಿರ ಚದರ ಅಡಿಯಷ್ಟು ಮಿತಿಗೆ ಒಳಪಟ್ಟಿರುತ್ತದೆ ಎಂದು ವಿಧೇಯಕ ಹೇಳುತ್ತದೆ. ಆದರೆ, ಸರಕಾರಿ ಜಮೀನು ಮಂಜೂರಾತಿಯೂ ಷರತ್ತಿಗೆ ಒಳಪಟ್ಟಿದೆ ಎಂದು ಹೇಳಿದರು.

 

click me!