
ಪಾಟ್ನಾ(ಜುಲೈ 27): ನಿನ್ನೆ ಸಂಜೆಯಷ್ಟೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಜೆಡಿಯು ಮುಖಂಡ ನಿತೀಶ್ ಕುಮಾರ್ ಇದೀಗ ಮುಖ್ಯಮಂತ್ರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಆರ್'ಜೆಡಿ, ಕಾಂಗ್ರೆಸ್'ನ ಸ್ನೇಹ ತೊರೆದು ಬಿಜೆಪಿ ಸಖ್ಯದೊಂದಿಗೆ ಅಧಿಕಾರಕ್ಕೆ ಬಂದಿರುವ ನಿತೀಶ್ ಕುಮಾರ್ ಇಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ನಿತೀಶ್-ಸುಶೀಲ್ ಜೋಡಿ ಮತ್ತೆ ಒಂದಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ.
ಜೆಡಿಯು, ಆರ್'ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳ ಮಹಾಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬರುವ ಮುನ್ನ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟದ ಸರಕಾರವಿತ್ತು. ಆದರೆ, ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ನಂತರ ನಿತೀಶ್ ಕುಮಾರ್ ಅವರು ಬಿಜೆಪಿಯ ಸಖ್ಯವನ್ನು ತೊರೆದಿದ್ದರು. ಇದೀಗ 4 ವರ್ಷಗಳ ನಂತರ ಆರ್'ಜೆಡಿ-ಬಿಜೆಪಿ ಸರಕಾರದ ಕಂಬ್ಯಾಕ್ ಆಗಿದೆ.
ಲಾಲೂ ಪುತ್ರನ ಭ್ರಷ್ಟಾಚಾರ:
ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟದ ಸಂಗವನ್ನು ತೊರೆಯಲು ಕೆಲವಾರು ಪ್ರಮುಖ ಕಾರಣಗಳಿವೆ. ಮೊದಲನೆಯದು, ಆರ್'ಜೆಡಿ ಪಕ್ಷದ ಭ್ರಷ್ಟಾಚಾರಗಳು. ಆರ್'ಜೆಡಿ ವಿರುದ್ಧದ, ಅದರಲ್ಲೂ ಡಿಸಿಎಂ ಹಾಗು ಲಾಲೂ ಪುತ್ರ ತೇಜಸ್ವಿ ಯಾದವ್ ವಿರುದ್ಧ ಒಂದಿಲ್ಲೊಂದು ಭ್ರಷ್ಟಾಚಾರ ಆರೋಪಗಳು ನಿತೀಶ್ ಕುಮಾರ್ ಅವರಿಗೆ ಮುಜುಗರ ತಂದಿತ್ತು. ಎರಡನೆಯದು, ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ನಡುವೆ ಇದ್ದ ಬಿರುಕು ನಿಧಾನವಾಗಿ ಕಡಿಮೆಯಾಗುತ್ತಾ ಬಂದು ಇಬ್ಬರಲ್ಲೂ ಹೊಸ ಹೊಂದಾಣಿಕೆ ಹುಟ್ಟಿಕೊಂಡಿದ್ದು. ಮೋದಿ ಮೇಲಿನ ಅಸಹನೆಯಿಂದ ಬಿಜೆಪಿಯಿಂದ ದೂರ ಉಳಿದಿದ್ದ ನಿತೀಶ್'ಗೆ ಈಗ ಅದೇ ಮೋದಿ ಮೇಲಿನ ಸ್ನೇಹವು ಈಗ ಬಿಜೆಪಿ-ಜೆಡಿಯು ಸರಕಾರದ ಮರು ಅಸ್ತಿತ್ವಕ್ಕೆ ಕಾರಣವಾಗಿದೆ.
ಆರ್'ಜೆಡಿ ನಂ.1; ನಿತೀಶ್'ಗೆ ಬಹುಮತ ಸಿಗುತ್ತಾ?
ಬಿಹಾರದಲ್ಲಿ ಆರ್'ಜೆಡಿ ಪಕ್ಷವೇ ಅತ್ಯಧಿಕ ಸ್ಥಾನ ಗಳಿಸಿ ನಂಬರ್ ಒನ್ ಸ್ಥಾನದಲ್ಲಿದೆ. ಬಿಜೆಪಿ ಮತ್ತು ಜೆಡಿಯು ಪಕ್ಷಗಳು ನಂತರದ ಸ್ಥಾನದಲ್ಲಿವೆ. ಈ ಹಿನ್ನೆಲೆಯಲ್ಲಿ ಸರಕಾರ ರಚನೆ ಮಾಡಿರುವ ನಿತೀಶ್ ಕುಮಾರ್'ಗೆ ಬಹುಮತ ಸಿಗುತ್ತಾ ಎಂಬ ಕುತೂಹಲ ಸಹಜವಾಗೇ ಬರುತ್ತದೆ.
ಪಕ್ಷಗಳ ಬಲಾಬಲ:
ಒಟ್ಟು ಸ್ಥಾನಗಳು: 243
ಆರ್'ಜೆಡಿ: 80
ಜೆಡಿಯು: 71
ಬಿಜೆಪಿ: 53
ಕಾಂಗ್ರೆಸ್: 27
ಸಿಪಿಐ(ಎಂಎಲ್): 3
ಎಲ್'ಜೆಪಿ: 2
ಆರ್'ಎಲ್'ಎಸ್'ಪಿ: 2
ಎಚ್'ಎಎಂ: 1
ನಿತೀಶ್'ಗೆಷ್ಟು ಸಪೋರ್ಟ್?
ಬಹುಮತಕ್ಕೆ ಬೇಕಾಗಿರುವುದು: 122 ಸ್ಥಾನಗಳು
ಎನ್'ಡಿಎ ಮೈತ್ರಿಕೂಟಕ್ಕೆ: 129 ಸ್ಥಾನಗಳು
(ಜೆಡಿಯು, ಬಿಜೆಪಿ, ಎಲ್'ಜೆಪಿ, ಆರ್'ಎಲ್'ಎಸ್'ಪಿ, ಎಚ್ಎಎಂ ಮೈತ್ರಿ)
ಜಾತ್ಯತೀತ ಕೂಟಕ್ಕೆ: 114 ಸ್ಥಾನಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.