
ಬೆಂಗಳೂರು(ನ.04): ‘ಸಿದ್ದರಾಮಯ್ಯನವರು ನನ್ನ ಸ್ನೇಹಿತರು. ಕರ್ನಾಟಕದಲ್ಲಿ ಮದ್ಯಪಾನ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಅವರಿಗೂ ಹೇಳಿ. ನನ್ನ ಅಭಿಪ್ರಾಯವನ್ನೂ ಅವರಿಗೆ ತಿಳಿಸಿ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದ್ದಾರೆ.
ಬಿಹಾರದಲ್ಲಿ ಮದ್ಯಪಾನ ನಿಷೇಧ ಮಾಡಿರುವುದನ್ನು ಅಧ್ಯಯನ ನಡೆಸಲು ರಾಜ್ಯದಿಂದ ತೆರಳಿರುವ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ನಿಯೋಗಕ್ಕೆ ನಿತೀಶ್‌ಕುಮಾರ್ ಈ ರೀತಿ ಹೇಳಿದ್ದಾರೆ. ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ನೇತೃತ್ವದ 35 ಜನರ ನಿಯೋಗದ ಜತೆ ಶುಕ್ರವಾರ ಮಧ್ಯಾಹ್ನ ಅರ್ಧಗಂಟೆಗಳ ಕಾಲ ಚರ್ಚೆ ನಡೆಸಿದ ನಿತೀಶ್‌ಕುಮಾರ್ ಅವರು ಮದ್ಯಪಾನ ನಿಷೇಧದಿಂದ ಆಗುವ ಸಕಾರಾತ್ಮಕ ಬದಲಾವಣೆಗಳನ್ನು ವಿವರಿಸಿದ್ದಲ್ಲದೇ ಕರ್ನಾಟಕದ ಜನತೆಗೂ ಇದರಿಂದ ಅನುಕೂಲ ಆಗಬೇಕಾದರೆ ಸಿದ್ದರಾಮಯ್ಯನವರು ಕಾಯ್ದೆ ಜಾರಿಗೆ ತರಬೇಕು.
ಅವರೂ ನನ್ನ ಸ್ನೇಹಿತರು. ಅವರಿಗೆ ನನ್ನ ಮಾತುಗಳನ್ನು ತಿಳಿಸಿ ಎಂದು ಸ್ವತಃ ನಿತೀಶ್‌ಕುಮಾರ್ ತಿಳಿಸಿದರು ಎಂದು ರುದ್ರಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಬಿಹಾರ ರಾಜ್ಯದಲ್ಲಿ ಕಳೆದ 18 ತಿಂಗಳಿನಿಂದ ಸಂಪೂರ್ಣ ಮದ್ಯಪಾನ ಹಾಗೂ ಮಾರಾಟವನ್ನು ನಿಷೇಧಿಸಿರುವ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರದ ಮಾದರಿಯಲ್ಲೇ ಕರ್ನಾಟಕದಲ್ಲೂ ಮದ್ಯ ಮಾರಾಟ ನಿಷೇಧಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಕರ್ನಾಟಕದಲ್ಲೂ ಇದೇ ಮಾದರಿ ಕಾಯ್ದೆ ಜಾರಿಗೊಳಿಸಬೇಕಾಗಿದೆ. ಈ ಬಗ್ಗೆ ಎರಡು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಕೊಡುತ್ತೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.