ಥೈಲ್ಯಾಂಡ್'ನಲ್ಲಿ ಮಂಡ್ಯದ ತಮಟೆ ಸದ್ದು

By Suvarna Web DeskFirst Published Jul 4, 2017, 6:04 PM IST
Highlights

ತಮಟೆ ಕಲೆಯಲ್ಲಿ ಮಂಡ್ಯದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿ ಕಲಾವಿದ ನಿಂಗರಾಜು ಅವರದು. ಈ ಕಲಾವಿದ ಥೈಲ್ಯಾಂಡ್'ನ ಬ್ಯಾಂಕಾಕ್'ನಲ್ಲಿ ನಡೆದ ಅಂತರಾಷ್ಟ್ರೀಯ ಜಾನಪದ ಕಲಾ ಪ್ರದರ್ಶನದಲ್ಲಿ ಭಾರತವನ್ನುಪ್ರತಿನಿಧಿಸಿದ್ದಾರೆ.

ಮಂಡ್ಯದ ನಿಂಗರಾಜು ತಮಟೆಗೆ ಅಂತರಾಷ್ಟ್ರೀಯ ಕಲಾವಿದರೂ ಮೆಚ್ಚುಗೆ ಸೂಚಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು ಮಂಡ್ಯದ ಏಕೈಕ ತಮಟೆ ಕಲಾವಿದರಿವರು. ಕಳೆದ ಎರಡು ದಿನಗಳಿಂದ ಬ್ಯಾಂಕಾಕ್'ನಲ್ಲಿ ನಡೆದ ಅಂತಾರಾಷ್ಟ್ರೀಯ ಜನಪದಕಲಾ ಪ್ರದರ್ಶನ ತಮಟೆ ವಾದನದ ಮೂಲಕ ವಿದೇಶಿಯರ ಗಮನ ಸೆಳೆದಿದ್ದಾರೆ. ಇವರೊಂದಿಗೆ, ಚಿಕ್ಕರಿಸಿನಕೆರೆ ಸಿ.ಎಸ್.ಕುಮಾರ್ ಪೂಜಾಕುಣಿತ, ಭೀಮನಕೆರೆ ನವೀನ್ ತಮಟೆ ಕಲೆಗಳ ಪ್ರದರ್ಶನ ನೀಡುತ್ತಿದ್ದಾರೆ.

1) ದಶಕಗಳ ಕಲಾಸೇವೆ

15 ವರ್ಷಗಳಿಂದ ತಮಟೆ ಬಾರಿಸುತ್ತಿರುವ ನಿಂಗರಾಜು, 10 ಸಾವಿರಕ್ಕೂ ಹೆಚ್ಚು ತಮಟೆ ಪ್ರದರ್ಶನಗಳನ್ನು ನೀಡಿದ್ದಾರೆ. ಜೊತೆಗೆ 100ಕ್ಕೂ ಹೆಚ್ಚು ಮಂದಿಗೆ ಕಲೆಯನ್ನು ಧಾರೆ ಎರೆದಿದ್ದಾರೆ. ಈ ಹಿಂದೆಯೂ ಸಿಂಗಾಪುರದಲ್ಲಿ ತಮಟೆ ಪ್ರದರ್ಶನನೀಡಿದ್ದಾರೆ.

2)ಎಲ್ಲೆಲ್ಲ ಪ್ರದರ್ಶನ?

ಮೈಸೂರು ದಸರಾ, ಹಂಪಿ ಉತ್ಸವ, ಚಿಕ್ಕಮಗಳೂರು, ಮಹದೇಶ್ವರ ಬೆಟ್ಟ, ಮಳವಳ್ಳಿಯ ಶಿಂಷಾ ಉತ್ಸವಗಳಲ್ಲಿ ತಮಟೆ ಪ್ರದರ್ಶನ ನೀಡಿದ್ದಾರೆ. ಪಂಚಾಬ್'ನ ಅಮೃತ್'ಸರ್, ದೆಹಲಿಯಲ್ಲಿ 3 ಬಾರಿ, ಮುಂಬೈ ಹೀಗೆ ಹೊರರಾಜ್ಯಗಳಲ್ಲಿ ಖ್ಯಾತಿಗಳಿಸಿದ್ದಾರೆ.

3)ತಮಟೆ ವಾದನಕ್ಕೆ ರೋಮಾಂಚನ

ನಿಂಗರಾಜು ಕೈಯಲ್ಲಿ ತಮಟೆ ಹಿಡಿದು ಬಾರಿಸಿದರೆ ನೋಡುಗರ ಮೈ ನವಿರೇಳಿಸುತ್ತದೆ. ಬರೀ ತಮಟೆ ಬಾರಿಸುವುದು ಮಾತ್ರವಲ್ಲ, ವಿವಿಧ ಬಗೆಯ ಸಾಹಸಗಳನ್ನೂ ಮಾಡುತ್ತಾರೆ. ಇವನ್ನು ನೋಡುವುದು ರೋಮಾಂಚನ ಹುಟ್ಟಿಸುತ್ತದೆ.

 

ಚಿಕ್ಕವಯಸ್ಸಿನಿಂದಲೇ ತಮಟೆ ಕಲೆಯನ್ನು ಕಲಿತು ಪ್ರದರ್ಶನ ನೀಡಬೇಕೆಂಬ ಹಂಬಲ ನನ್ನದಾಗಿತ್ತು. ಛಲದಿಂದ ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವವರೆಗೆ ಬಂದಿರುವುದು ಹೆಮ್ಮೆ ತಂದಿದೆ.

- ನಿಂಗರಾಜು, ಅಂತಾರಾಷ್ಟ್ರೀಯ ತಮಟೆ ಕಲಾವಿದ

 

-- ಅಣ್ಣೂರು ಸತೀಶ್, ಕನ್ನಡಪ್ರಭ ವಾರ್ತೆ

 

click me!