ಮಜಾ ತೆಗೆದುಕೊಳ್ಳಲು ಊಟದಲ್ಲಿ  ಜಿರಲೆ ಹಾಕಿದ್ರು!

Published : Oct 23, 2017, 01:25 PM ISTUpdated : Apr 11, 2018, 01:12 PM IST
ಮಜಾ ತೆಗೆದುಕೊಳ್ಳಲು ಊಟದಲ್ಲಿ  ಜಿರಲೆ ಹಾಕಿದ್ರು!

ಸಾರಾಂಶ

ಇಂದಿರಾ ಕ್ಯಾಂಟೀನ್ ಊಟದಲ್ಲಿ ಜಿರಲೆ ನಾಟಕದ ಸತ್ಯ ಬಯಲು | ಆಟೋ ಚಾಲಕ, ಫೋಟೋಗ್ರಾಫರ್ ಸೇರಿ ನಾಲ್ವರ ವಿರುದ್ಧ  ದೂರು

ಬೆಂಗಳೂರು: ಕಳೆದ ಎರಡು ದಿನಗಳಿಂದ ಭಾರೀ ಸುದ್ದಿ ಮಾಡಿದ್ದ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಲೆ ಸಿಕ್ಕ ಆರೋಪ ಶುದ್ಧ ಸುಳ್ಳು ಎಂಬುದು ಇದೀಗ ಬಹಿರಂಗವಾಗಿದೆ.

ಜಿರಲೆ ಸಿಕ್ಕಿರುವುದಾಗಿ ರಾದ್ಧಾಂತ ಮಾಡಿದ್ದ ಆರೋಪಿಗಳು ‘ಮಜಾ ತೆಗೆದುಕೊಳ್ಳಲು ಆಹಾರದಲ್ಲಿ ಜಿರಲೆ ಸಿಕ್ಕಿರೋದಾಗಿ ನಾವೇ ನಾಟಕ ಸೃಷ್ಟಿಸಿದ್ದೆವು’ ಎಂದು ಪೊಲೀಸ್ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಶನಿವಾರ ಬೆಳಗ್ಗೆ ಕೊಟ್ಟಿಗೆಪಾಳ್ಯ ವಾರ್ಡ್ ವ್ಯಾಪ್ತಿಯ ಮಾಳಗಾಳ ಇಂದಿರಾ ಕ್ಯಾಂಟೀನ್‌ಗೆ ಬಂದ ನಾಲ್ವರು ವಿತರಿಸಲಾದ ಉಪಹಾರದಲ್ಲಿ ಜಿರಲೆ ಸಿಕ್ಕಿದೆ, ಅನ್ನ ಹಳಸಿದೆ ಎಂದು ಆರೋಪಿಸಿ ಕ್ಯಾಂಟೀನ್ ಸಿಬ್ಬಂದಿಯೊಂದಿಗೆ ತಗಾದೆ ತೆಗೆದ ದೃಶ್ಯ ಹಾಗೂ ಆಹಾರದಲ್ಲಿ ಜಿರಲೆ ಸಿಕ್ಕಿದೆ ಎಂದು ತೋರಿಸಲಾಗಿದ್ದ ಫೋಟೋ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಸತ್ಯಾಸತ್ಯತೆ ಪರಿಶೀಲಿಸಲು ಮುಂದಾದ ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕ್ಯಾಂಟೀನ್‌ಗೆ ಬಂದ ನಾಲ್ವರು ಉದ್ದೇಶಪೂರ್ವಕವಾಗಿ ಊಟದಲ್ಲಿ  ಜಿರಲೆ ಸಿಕ್ಕಿರುವುದಾಗಿ ಬಿಂಬಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹಾಗಾಗಿ ಸಿಸಿಟಿವಿ ದೃಶ್ಯಾವಳಿ ಸಮೇತ ಬಿಬಿಎಂಪಿ ಅಧಿಕಾರಿಗಳು ಭಾನುವಾರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನಾಲ್ವರು ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಿ ಪ್ರತ್ಯೇಕ ದೂರು ದಾಖಲಿಸಿದರು. ಆ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಸೈಬರ್ ಕ್ರೈಂ ಪೊಲೀಸರು ದೃಶ್ಯಾವಳಿ ಆಧರಿಸಿ ಆಟೋ ಚಾಲಕ ಹೇಮಂತ್ ಕುಮಾರ್ ಮತ್ತು ಫೋಟೋಗ್ರಾಫರ್ ದೇವರಾಜ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಆರೋಪಿಗಳು, ಇದು ಪೂರ್ವನಿಯೋಜಿತ ಕೃತ್ಯ. ಈ ರೀತಿ ನಾಟಕ ಮಾಡಲು ಮೊದಲೇ ಸಿದ್ಧರಾಗಿ ಬಂದಿದ್ದೆವು. ಮಜಾ ತೆಗೆದುಕೊಳ್ಳಲು ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಲೆ ಇರುವುದಾಗಿ ಮತ್ತು ಅನ್ನ ಹಳಸಿರುವ ನಾಟಕ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಫೋಟೋದಲ್ಲಿ ಜಿರಲೆ ಎಂದು ಬಿಂಬಿಸಿರುವುದು ಜಿರಲೆಯಲ್ಲ ವಾಂಗೀಬಾತ್‌ನಲ್ಲಿ ಸಿಕ್ಕ ಬದನೆಕಾಯಿಯ ತುಂಡು, ಕಪ್ಪು ಇರುವೆ ಕೂಡ ತಾವೇ ತಂದು ಹಾಕಿದ್ದು ಎಂದು ಪೊಲೀಸ್ ತನಿಖೆಯಲ್ಲಿ ಸತ್ಯ ಬಾಯಿಬಿಟ್ಟಿದ್ದಾರೆ ಎಂದು ಬಿಬಿಎಂಪಿ ಉನ್ನತ ಮೂಲಗಳು ಖಚಿತಪಡಿಸಿವೆ.

ಈ ಮಧ್ಯೆ, ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದ ಆಟೋ ಡ್ರೈವರ್ ಹೇಮಂತ್ ಕುಮಾರ್ ಮತ್ತು ಫೋಟೋಗ್ರಾಫರ್ ದೇವರಾಜ್‌ನನ್ನು ಪ್ರಾಥಮಿಕ ತನಿಖೆ ಬಳಿಕ ಹೆಚ್ಚಿನ ವಿಚಾರಣೆಗೆ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ತುರುವೇಕೆರೆಯಲ್ಲಿ ಅಡಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಒಂದೇ ಪ್ಲೇಟ್ ತಿಂಡಿ ಪಡೆದಿದ್ರು!

ಆಹಾರದಲ್ಲಿ ಜಿರಲೆ ಸಿಕ್ಕ ಆರೋಪದ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಘಟನೆ ನಡೆದ ಮಾಳಗಾಳ ಇಂದಿರಾ ಕ್ಯಾಂಟೀನ್‌ನ ಸಿಸಿಟಿವಿ ಕ್ಯಾಮರಾದ ಪೂರ್ಣ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ. ದೃಶ್ಯಾವಳಿಯಲ್ಲಿ ಹೇಮಂತ್ ಕುಮಾರ್, ದೇವರಾಜ್, ಅರುಣ್, ಸತೀಶ್ ಒಟ್ಟಾಗಿ

ಕ್ಯಾಂಟೀನ್‌ಗೆ ಬಂದು ಒಂದೇ ಪ್ಲೇಟ್ ತಿಂಡಿ ಪಡೆಯುತ್ತಾರೆ. ತಿಂಡಿ ಪಡೆದ ನಂತರ ಕ್ಯಾಂಟೀನ್‌ನಿಂದ ಹೊರಗೆ ಹೋಗಿ ಐದು ನಿಮಿಷ ಬಿಟ್ಟು ಒಳ ಬಂದು ಆಹಾರದಲ್ಲಿ ಜಿರಲೆ ಸಿಕ್ಕಿದೆ, ಅನ್ನ ಹಳಸಿ ಹೋಗಿದೆ ಎಂದು ಕ್ಯಾಂಟೀನ್ ಸಿಬ್ಬಂದಿಯೊಂದಿಗೆ ತಗಾದೆ ತೆಗೆಯುತ್ತಾರೆ. ಅಷ್ಟೇ ಅಲ್ಲ, ತಾವೇ ಸೃಷ್ಟಿಸಿದ ರಾದ್ಧಾಂತವನ್ನು ಗುಂಪಿನ ಒಬ್ಬಾತ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದರೆ ಮತ್ತೊಬ್ಬ ಉಪಹಾರದ ಪೋಟೋ ತೆಗೆದು ಕೊಳ್ಳುತ್ತಾನೆ. ಬಳಿಕ ಎಲ್ಲರೂ ಬೈದುಕೊಂಡು ಹೊರಗೆ ನಡೆಯುತ್ತಾರೆ.

ಇದೆಲ್ಲವನ್ನೂ ನೋಡಿದಾಗ ಉದ್ದೇಶಪೂರ್ವಕವಾಗಿ ಈ ನಾಲ್ವರು ಅನಾಶ್ಯಕವಾಗಿ ವಿವಾದ ಸೃಷ್ಟಿಸಿರುವ ಅನುಮಾನ ಬಂದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರು ಮತ್ತು ಕಾಮಾಕ್ಷಿ ಪಾಳ್ಯಪೊಲೀಸ್ ಠಾಣೆಯಲ್ಲಿ ಈ ನಾಲ್ವರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ