ದಂಡಕ್ಕಿಂತ ಅಗ್ಗ: ಸ್ವಂತ ವಾಹನ ಬಿಟ್ಟು ಟ್ಯಾಕ್ಸಿ, ಬಿಎಂಟಿಸಿ ಬಸ್‌ಗಳಿಗೆ ಮೊರೆ?

By Web DeskFirst Published Sep 7, 2019, 9:34 AM IST
Highlights

ಸ್ವಂತ ವಾಹನ ಬಿಟ್ಟು ಟ್ಯಾಕ್ಸಿ, ಬಿಎಂಟಿಸಿ ಬಸ್‌ಗಳಿಗೆ ಮೊರೆ?| ದುಬಾರಿ ದಂಡ ಕಟ್ಟುವ ಬದಲು ಸಾರ್ವಜನಿಕರ ಸಾರಿಗೆಯೇ ಸೂಕ್ತ ಎನ್ನುತ್ತಿರುವ ವಾಹನ ಸವಾರರು| ಮೆಟ್ರೋ, ಬಸ್‌, ಟ್ಯಾಕ್ಸಿ ದರವೇ ದಂಡಕ್ಕಿಂತ ಅಗ್ಗ!

ಬೆಂಗಳೂರು[ಸೆ.07]: ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡದ ಮೊತ್ತದಲ್ಲಿ ಭಾರಿ ಪ್ರಮಾಣದ ಹೆಚ್ಚಳದಿಂದ ಒಂದು ಕಡೆ ವಾಹನಗಳ ಮಾಲಿಕರು ತತ್ತರಿಸಿ ಹೋಗುತ್ತಿದ್ದರೆ, ಮತ್ತೊಂದು ಕಡೆ ದಂಡದಿಂದ ತಪ್ಪಿಸಿಕೊಳ್ಳಲು ಆ್ಯಪ್‌ ಆಧಾರಿತ ಟ್ಯಾಕ್ಸಿ ಅಥವಾ ಬಿಎಂಟಿಸಿಯಂತಹ ಸಾರ್ವಜನಿಕ ಸಾರಿಗೆಗಳ ಕಡೆಗೆ ವಾಹನ ಮಾಲಿಕರು ಮುಖ ಮಾಡುವ ಲಕ್ಷಣ ಕಂಡು ಬರುತ್ತಿದೆ.

ಮದ್ಯ ಸೇವಿಸಿ ವಾಹನ ಚಾಲನೆ ಪ್ರಕರಣಗಳಲ್ಲಿ ಚಾಲಕನಿಗೆ 10 ಸಾವಿರ ದುಬಾರಿ ದಂಡ ವಿಧಿಸುತ್ತಿರುವುದರಿಂದ ಇನ್ನು ಮುಂದೆ ಪಾನಮತ್ತ ಚಾಲಕರು ಸ್ವಂತದ ವಾಹನ ಬಿಟ್ಟು ಆ್ಯಪ್‌ ಆಧಾರಿತ ಓಲಾ, ಉಬರ್‌ ಟ್ಯಾಕ್ಸಿಗಳು, ಆಟೋಗಳು ಅಥವಾ ಬಿಎಂಟಿಸಿ ಬಸ್‌ಗಳ ಮೊರೆ ಹೋಗುವ ಸಾಧ್ಯತೆಯಿದೆ. ಸ್ವಂತ ವಾಹನ ಉಳ್ಳವರೆಲ್ಲಾ ಚಾಲಕರನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ದುಬಾರಿ ದಂಡದ ಜತೆಗೆ ನ್ಯಾಯಾಲಯಗಳಿಗೆ ಹೋಗುವ ಕಿರಿಕಿರಿ ಅನುಭವಿಸುವುದಕ್ಕಿಂತ ಖಾಸಗಿ ವಾಹನಗಳು ಅಥವಾ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದರೂ ಅಶ್ಚರ್ಯವಿಲ್ಲ.

ಹೊಸ ಟ್ರಾಫಿಕ್ ರೂಲ್ಸ್; ಚನ್ನರಾಯಪಟ್ಟಣದ ಸ್ವಾಮಿಗೆ 10 ಸಾವಿರ ರೂ ದಂಡ!

ವೀಕೆಂಡ್‌ ರಿಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ವಾರಾಂತ್ಯ ದಿನಗಳಲ್ಲಿ ಐಟಿ-ಬಿಟಿ ಉದ್ಯೋಗಿಗಳು, ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯ ಮೋಜು-ಮಸ್ತಿ ಮಾಡುವುದು ಸಾಮಾನ್ಯವಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ನಗರದ ಪ್ರತಿಷ್ಠಿತ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಕೆಲ ಪ್ರಮುಖ ಸ್ಥಳಗಳ ಪಬ್‌, ಬಾರ್‌, ಡಿಸ್ಕೋ ತೆಕ್‌ಗಳಲ್ಲಿ ವಾರಾಂತ್ಯ ಪಾರ್ಟಿಗಳು ಎಗ್ಗಿಲ್ಲದೆ ಜರುಗುತ್ತವೆ. ಪಾರ್ಟಿ ಎಂದ ಮೇಲೆ ಮದ್ಯ ಸೇವನೆ ಸಾಮಾನ್ಯ. ಹೀಗಿರುವಾಗ ಅವರು ಸ್ವಂತ ವಾಹನಗಳಲ್ಲಿ ತೆರಳುವುದು ಕಷ್ಟಸಾಧ್ಯ. ಸಂಚಾರ ಪೊಲೀಸರು ವೀಕೆಂಡ್‌ ದಿನಗಳಲ್ಲಿ ನಗರದ ಹಲವೆಡೆ ತಪಾಸಣೆ ಬಿಗಿಗೊಳಿಸುವುದರಿಂದ ಪಾನಮತ್ತರಾಗಿ ಒಂದು ವೇಳೆ ವಾಹನ ಚಲಾಯಿಸಿದರೆ ದುಬಾರಿ ದಂಡ ಕಟ್ಟಿಟ್ಟಬುತ್ತಿ. ಹಾಗಾಗಿ ಈ ವರ್ಗದ ಜನರು ಆ್ಯಪ್‌ ಆಧಾರಿತ ಟ್ಯಾಕ್ಸಿ ಅಥವಾ ಆಟೋಗಳ ಮೊರೆ ಹೋಗಬಹುದು.

ಚಾಲಕರಿಗೆ ಎರಡೇ ಆಯ್ಕೆ:

ಈಗಾಗಲೇ ನಗರ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮುಲಾಜಿಲ್ಲದೆ ಪರಿಷ್ಕೃತ ದಂಡದ ಮೊತ್ತ ವಸೂಲಿ ಮಾಡುತ್ತಿದ್ದಾರೆ. ವಾಹನ ಚಾಲಕರಿಗೆ ಈ ದುಬಾರಿ ದಂಡದ ಬಿಸಿ ಕೊಂಚ ದೊಡ್ಡ ಪ್ರಮಾಣದಲ್ಲಿಯೇ ತಟ್ಟಲಾರಂಭಿಸಿದೆ. ಈ ದುಬಾರಿ ದಂಡದ ಅಸ್ತ್ರ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ, ವಾಹನ ಚಾಲಕರು ಮನೆಯಿಂದ ಹೊರಡುವ ಮುನ್ನ ಡಿಎಲ್‌, ಇನ್‌ಶ್ಯೂರೆನ್ಸ್‌, ವಾಹನದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹೊರ ಬರುವಂತೆ ಮಾಡಿದೆ. ಇದು ಚಾಲಕರಲ್ಲಿ ಭಯಕ್ಕೆ ಕಾರಣವಾಗಿದೆ. ಈಗ ಚಾಲಕರ ಎದುರು ಎರಡು ಆಯ್ಕೆಗಳಿವೆ. ಒಂದು ನಿಗದಿತ ದಾಖಲೆ ಹೊಂದಬೇಕು. ಇಲ್ಲವಾದರೆ, ಸ್ವಂತ ವಾಹನ ಬಿಟ್ಟು ಟ್ಯಾಕ್ಸಿ, ಆಟೋ, ಬಿಎಂಟಿಸಿ, ಮೆಟ್ರೋ ರೈಲಿನಂತಹ ಸಾರಿಗೆ ಅವಲಂಬಿಸುವುದು ಅನಿವಾರ್ಯವಾಗಿದೆ.

ರಸ್ತೆ ಸುಧಾರಿಸಿ, ನಂತರ ದಂಡ ವಿಧಿಸಿ!

ಇಷ್ಟುದಿನ ಡಿಎಲ್‌, ಹೆಲ್ಮೆಟ್‌, ಇನ್‌ಶ್ಯೂರೆನ್ಸ್‌, ವಾಹನಗಳ ದಾಖಲೆ ಇಲ್ಲದವರು ಧೈರ್ಯವಾಗಿ ಓಡಾಡುತ್ತಿದ್ದರು. ಒಂದು ವೇಳೆ ತಪಾಸಣೆ ವೇಳೆ ಸಿಕ್ಕಿ ಬಿದ್ದರೆ ಕಡಿಮೆ ಮೊತ್ತದ ದಂಡ ಪಾವತಿಸಿ ಪಾರಾಗುತ್ತಿದ್ದರು. ಈಗ ಪರಿಷ್ಕೃತ ದಂಡದ ಮೊತ್ತ ಕೇಳಿ ಹೌಹಾರುತ್ತಿರುವ ವಾಹನ ಚಾಲಕರು, ಅಗತ್ಯ ದಾಖಲೆಗಳನ್ನು ಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗಳಿಗೆ ಎಡತಾಕುತ್ತಿದ್ದಾರೆ.

click me!