
ಬೆಳ್ತಂಗಡಿ (ನ.25): ಕೃಷಿ ಪ್ರಧಾನವಾದ ಭಾರತದಲ್ಲಿ ಕೃಷಿಯನ್ನು ಕಡೆಗಣಿಸಬಾರದು. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಕೃಷಿ ಲಾಭದಾಯಕವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ನಿಡ್ಲೆಯ ಅವಿನಾಶ್ ಮತ್ತು ಬಳಗದವರು ರೂಪಿಸಿದ ಕೃಷಿಗೆ ಬಳಸುವ ಡ್ರೋನ್ (ಮಾನವ ನಿರ್ಮಿತ ವಿಮಾನ)ವನ್ನು ಗುರುವಾರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಆಶ್ರಯದಲ್ಲಿ 160 ಕೇಂದ್ರಗಳಲ್ಲಿ ರೈತರಿಗೆ ಡ್ರೋನ್ ಬಾಡಿಗೆಗೆ ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ಡ್ರೋನ್‌ನ ರೂವಾರಿ ನಿಡ್ಲೆಯ ಅವಿನಾಶ್ ರಾವ್ ಮತ್ತು ಬಳಗದವರ ಪ್ರಯತ್ನ - ಸಾಧನೆಯನ್ನು ಶ್ಲಾಘಿಸಿ ಹೆಗ್ಗಡೆಯವರು ಅವರನ್ನು ಅಭಿನಂದಿಸಿದರು. ಆರಂಭದಲ್ಲಿ ಡ್ರೋನ್ ಬಳಕೆಯಲ್ಲಿ ಕೆಲವು ಸಮಸ್ಯೆಗಳು ಇದ್ದರೂ ಅದನ್ನು ಪರಿಹರಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಕ್ಯಾಂಪ್ಕೋದ ಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದಿಂದ ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿದ್ದು, ನಿವೇದನ್‌ಎಂಬಾತ ಈಗಾಗಲೇ ಅಡಿಕೆ, ಚಹಾ, ಶ್ಯಾಂಪೂ, ಸಾಬೂನು ತಯಾರಿಸಿದ್ದು ಉತ್ತಮ ಬೇಡಿಕೆ ಇದೆ ಎಂದು ಹೆಗ್ಗಡೆಯವರು ತಿಳಿಸಿದರು. ಅವಿನಾಶ್ ರಾವ್ ಡ್ರೋನ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಿದರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಉಜಿರೆಯ ವಿಜಯ ರಾಘವ ಪಡ್ವೇಟ್ನಾಯ ಮತ್ತು ಬಿಜೆಪಿ ಮುಖಂಡ ಹರೀಶ್ ಪೂಂಜ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ದೇಸಾಯಿ ಸ್ವಾಗತಿಸಿದರು. ಡಾ.ಸಂದೀಪ್ ವಂದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.