
ತರೀಕೆರೆ(ನ.25): ಕೈ ಕೆಸರಾದರೆ ಬಾಯಿ ಮೊಸರು ಗಾದೆಯ ಮಾತು ಸುಳ್ಳಾಗಲಿಲ್ಲ. ಹಗಲು ರಾತ್ರಿ ಮನೆ ಮಂದಿ ಎಲ್ಲಾ ಕಷ್ಟಪಟ್ಟಿದ್ದು ಸಾರ್ಥಕವಾಯಿತು. ಈ ಸಾರಿ ಟೊಮ್ಯಾಟೋ ನನ್ನ ಕೈ ಹಿಡಿಯಿತು. ಲಕ್ಷಾಂತರ ರು. ಆದಾಯ ಬಂತು. ಹಿಂದೆ ಬಹಳ ನಷ್ಟವುಂಟಾಗಿತ್ತು. ಆದರೆ ಈ ಸಾರಿ ಹಾಗಾಗಲಿಲ್ಲ, ಚೆನ್ನಾಗಿಯೇ ಆದಾಯ ಬಂದಿದೆ. ಹೀಗೆ ಸಂತಸ ಹಂಚಿಕೊಂಡಿದ್ದು ಸಮೀಪದ ಗುಡ್ಡದಹಳ್ಳಿಯ ಪ್ರಗತಿಪರ ರೈತ ಪರಮೇಶ್ವರಪ್ಪ. ತಮ್ಮ ಮೂರುವರೆ ಎಕರೆ ಹೊಲದಲ್ಲಿ 6000 ಕ್ರೇಟ್‌ನಷ್ಟು ಬಹು ಉತ್ತಮವಾದ ಬಂಪರ್ ಟೊಮ್ಯಾಟೋ ಬೆಳೆಯನ್ನು ತನ್ನ ಮನೆಯಂಗಳದ ಕೊಟ್ಟಿಗೆ ಗೊಬ್ಬರದ ಕೃಪಾಶ್ರಯದಲ್ಲೇ ಬೆಳೆದಿರುವ ರೈತ ಪರಮೇಶ್ವರಪ್ಪ, ವರ್ಷದ 365 ದಿವಸವೂ ತಮ್ಮ ಹೊಲದಲ್ಲಿ ಟೊಮ್ಯಾಟೋ ಬಿಟ್ಟು ಬೇರೇನನ್ನೂ ಬೆಳೆಯುವುದಿಲ್ಲ. ಈ ಸಲ ಸುಮಾರು 4 ಲಕ್ಷ ರು. ಖರ್ಚು ಕಳೆದು 20 ಲಕ್ಷ ರು.ಲಾಭ ತಂದುಕೊಟ್ಟಿದೆ ಎಂದು ಖುಷಿಯಿಂದ ಹೇಳಿಕೊಳ್ಳುವ ಪರಮೇಶ್ವರಪ್ಪ, ಮಿಕ್ಕ ರೈತರಿಗೆ ಆದರ್ಶವಾಗಿದ್ದಾರೆ.
24 ಸಾವಿರ ಸಸಿ: ಟೊಮ್ಯಾಟೋ 60ರಿಂದ 70 ದಿನಗಳಲ್ಲಿ ಕಟಾವು ಪ್ರಾರಂಭವಾಗಿ ಬರುವಂತಹ ಬೆಳೆ. ಮೂರುವರೆ ಎಕರೆ ಯಲ್ಲಿ 24 ಸಾವಿರ ಸಸಿಗಳನ್ನು ಕೂರಿಸಲಾಗಿತ್ತು. ಎಲ್ಲ 24 ಸಾವಿರ ಗಿಡ ಗಳಿಗೂ ಸಕಾಲದಲ್ಲಿ ನೀರು ತಲುಪುವಂತೆ ಡ್ರಿಪ್ ಕೊಳವೆಗಳನ್ನು ಅಳವಡಿಸಿದ್ದೆ. ವ್ಯವಸಾಯ ಎಂದರೆ ಅನುಭವಿಗಳು ಹೇಳುವಂತೆ ಮನೆ ಮಂದಿಯಲ್ಲಾ ಹೊಲದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕಳೆ ಕೀಳುವುದು, ಸಮತಟ್ಟಾಗಿ ನೀರು ಗೊಬ್ಬರ, ಕಾಲ ಕಾಲಕ್ಕೆ ರೋಗ ಬಾರದಂತೆ ಔಷಧಗಳನ್ನು ಸಿಂಪಡಿಸಬೇಕು, ನಾಲ್ಕು ಟೊಮ್ಯಾಟೋ ಗಿಡಗಳಿಗೆ ಒಂದರಂತೆ ಮರದ ಗೂಟ ಕಟ್ಟಿ ತಂತಿಗಳನ್ನು ಎಳೆಯಬೇಕು. ತಂತಿಗೆ ಸರಳವಾಗಿ ದಾರವನ್ನು ಕಟ್ಟಿ ಕಾಯಿ ಬಿಡುವ ಗಿಡಗಳನ್ನು ತೊಟ್ಟಿಲಲ್ಲಿರುವ ಮಗುವಿನಿಂತೆ ಪೋಷಿಸಬೇಕು.
ಈ ಕೆಲಸಗಳನ್ನು ತುಂಬ ಶ್ರದ್ಧೆಯಿಂದ ಮಾಡಿದರೆ ಮಾತ್ರ ನಮ್ಮ ಕೆಲಸಕ್ಕೆ ತಕ್ಕಪ್ರತಿಫಲ ನಿರೀಕ್ಷಿಸಬಹುದು ಎನ್ನುವ ಪರಮೇಶ್ವರಪ್ಪ, ಕಳೆದ ಜೂನ್- ಜುಲೈ ತಿಂಗಳಿನಲ್ಲಿ ಆಲಿಕಲ್ಲು ಮಳೆ ಬರದೇ ಇದ್ದಿದ್ದರೆ ನಮ್ಮ ಹೊಲದ ಬೆಳೆಗಳಿಂದ ಕನಿಷ್ಠ 60ರಿಂದ 70 ಲಕ್ಷ ಆದಾಯ ಬರುತಿತ್ತು ಎನ್ನುತ್ತಾರೆ.
ಬೆಂಬಲಕ್ಕೆ ನಿಂತ ತೋಟಗಾರಿಕೆ ಇಲಾಖೆ: ಪ್ರತಿ ವರ್ಷ ಕಾಸಿಗೆ ತಕ್ಕ ಕಜ್ಜಾಯ ಎನ್ನುವಂತೆ ರೇಟಿಲ್ಲದೆ ಸೊರಗಿ ಹೋಗಿದ್ದ ಟೊಮ್ಯಾಟೋ ಬೆಳೆಗಳಿಗೆ ಈ ಸಾರಿ ಖಂಡಿತ ಒಳ್ಳೆ ಬೆಲೆ ಬಂದೇ ಬರುತ್ತದೆ. ಟೋಮ್ಯಾಟೋ ಬೆಳೆಯಿರಿ ಎಂದು ತರೀಕೆರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಮತ್ತು ಇಲಾಖೆ ಅಧಿಕಾರಿ ಲಿಂಗರಾಜು ಮತ್ತಿತರರು ನಮಗೆ ಬೆಂಬಲವಾಗಿ ನಿಂತು ಗಿಡಗಳಿಗೆ ಸರ್ಕಾರದಿಂದ ಡ್ರಿಪ್ ಕೊಳವೆಗಳನ್ನು, ಸಹಾಯಧನ ಕೊಡಿಸಿ ಬೆಂಬಲ ನೀಡಿದರು ಎಂದು ಕೃತಜ್ಞತೆಯಿಂದ ಅಧಿಕಾರಿಗಳನ್ನು ನೆನಪಿಸಿಕೊಳ್ಳುತ್ತಾರೆ.
ವರದಿ: ಅನಂತ ನಾಡಿಗ್ - ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.