
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11400 ಕೋಟಿ. ರು. ವಂಚನೆ ಮಾಡಿರುವ ಸಂಬಂಧ ಸಿಬಿಐ ಅಧಿಕಾರಿಗಳು ತಮ್ಮ ವಿರುದ್ಧ ಎಫ್‌ಐಆರ್ ಹಾಕಿದ ಕೆಲ ದಿನಗಳ ನಂತರವೂ ವಜ್ರದ ವ್ಯಾಪಾರಿ ನೀರವ್ ಮೋದಿ ಎರಡು ಆಭರಣ ಮಳಿಗೆಗಳನ್ನು ತೆರೆದಿದ್ದಾರೆ ಎನ್ನಲಾಗಿದೆ. ಖಾಸಗಿ ಟೀವಿ ಚಾನಲ್ಲೊಂದು ಈ ಕುರಿತು ವರದಿ ಮಾಡಿದೆ. ಎಫ್‌ಐಆರ್‌ಗೂ ಮೊದಲೇ ಅವರು ವಿದೇಶಕ್ಕೆ ಪಲಾಯನ ಮಾಡಿದ್ದು, ಪಲಾಯನದ ನಂತರವೂ ಎರಡು ಹೊಸ ಮಳಿಗೆಗಳನ್ನು ತೆರೆದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮಳಿಗೆಗಳನ್ನು ಎಲ್ಲಿ ತೆರೆದಿದ್ದಾರೆಂಬುದು ತಿಳಿದುಬಂದಿಲ್ಲ.
ಹಗರಣ ಬೆಳಕಿಗೆ ತಂದಿದ್ದು ಅಲಹಾಬಾದ್, ಆ್ಯಕ್ಸಿಸ್ ಬ್ಯಾಂಕ್?
ನಮ್ಮ ಬ್ಯಾಂಕಿನಲ್ಲಿ ನೀರವ್ ಮೋದಿ ಮತ್ತು ಆತನ ಮಾವ ಮೆಹುಲ್ ಚೋಕ್ಸಿ ನಡೆಸಿದ ಹಗರಣವನ್ನು ನಾವೇ ಬಯಲಿಗೆಳೆದಿದ್ದೇವೆ ಎಂದು ಪಿಎನ್‌ಬಿ ಹೇಳಿಕೊಂಡಿತ್ತು. ಆದರೆ, ವಾಸ್ತವದಲ್ಲಿ ಇದನ್ನು ಬಯಲಿಗೆಳೆದಿದ್ದು ಅಲಹಾಬಾದ್ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್‌ನ ಹಾಂಗ್‌ಕಾಂಗ್‌ನ ಶಾಖೆಗಳು ಎನ್ನಲಾಗುತ್ತಿದೆ. ಈ ಬ್ಯಾಂಕುಗಳು ನೀರವ್ ಮೋದಿಯ ಕಂಪನಿಗೆ ಹಣ ನೀಡುವಂತೆ ಪಿಎನ್‌ಬಿ ನೀಡಿದ್ದ ಅನುಮತಿ ಪತ್ರಗಳು ತಮ್ಮ ಬ್ಯಾಂಕಿಗೆ ಬಂದಾಗ ಅದನ್ನು ಮುಂಬೈನ ಬ್ರಾಡಿ ಹೌಸ್ ಪಿಎನ್‌ಬಿ ಶಾಖೆಯ ಗಮನಕ್ಕೆ ತಂದಿದ್ದವು. ಆಗ ಸರಿಯಾದ ದಾಖಲೆಯಿಲ್ಲದೆ ಅನುಮತಿ ಪತ್ರ ನೀಡಿರುವ ಬಗ್ಗೆ ಸಂಶಯಗೊಂಡ ಪಿಎನ್‌ಬಿ ಅಧಿಕಾರಿಗಳು ತನಿಖೆ ನಡೆಸಿದಾಗ ಹಗರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಮೊದಲು, ಗೋಕುಲನಾಥ್ ಶೆಟ್ಟಿನಿವೃತ್ತಿಯಾದ ನಂತರ ಅವರ ಜಾಗಕ್ಕೆ ಬಂದ ಇನ್ನೊಬ್ಬ ಡೆಪ್ಯುಟಿ ಮ್ಯಾನೇಜರ್‌ನಿಂದಾಗಿ ಹಗರಣ ಬೆಳಕಿಗೆ ಬಂದಿದೆ ಎಂದು ಪಿಎನ್‌ಬಿ ಹೇಳಿಕೊಂಡಿತ್ತು.
ಶೆಟ್ಟಿಯ ಮೇಲಧಿಕಾರಿಗಳಿಗೆ ಅಮಾನತು, ತನಿಖೆ ಬಿಸಿ
ಕರ್ನಾಟಕದ ಮೂಲ್ಕಿ ಮೂಲದ ಗೋಕುಲನಾಥ್ ಶೆಟ್ಟಿಅವರು ಪಿಎನ್‌ಬಿಯ ಮುಂಬೈ ಬ್ರಾಡಿ ಹೌಸ್ ಶಾಖೆಯಲ್ಲಿ ನೀರವ್ ಮೋದಿ ಜೊತೆ ಕೈಜೋಡಿಸಿ ಅವ್ಯವಹಾರ ನಡೆಸಿ ಈಗ ನಿವೃತ್ತಿಯ ನಂತರ ಬಂಧಿತರಾಗಿದ್ದಾರೆ. ಆದರೆ, ಅವರು ಅವ್ಯವಹಾರ ನಡೆಸುತ್ತಿದ್ದರೂ ಅದರ ಬಗ್ಗೆ ಕ್ರಮ ಕೈಗೊಳ್ಳದ ಕಾರಣಕ್ಕೆ 2011ರಿಂದ ಆ ಶಾಖೆಗೆ ಮುಖ್ಯಸ್ಥರಾಗಿದ್ದವರು ಮತ್ತು ಶೆಟ್ಟಿಯ ಮೇಲಧಿಕಾರಿಯಾಗಿದ್ದವರನ್ನು ಪಿಎನ್‌ಬಿ ಅಮಾನತುಗೊಳಿಸಿದೆ. ಜೊತೆಗೆ, ಸಿಬಿಐ ಕೂಡ ಅವರನ್ನು ಶಂಕಿತರು ಎಂದು ಪರಿಗಣಿಸಿದ್ದು, ಅವರ ತನಿಖೆಗೆ ಮುಂದಾಗಿದೆ. ಅವರು ಕೇವಲ ನಿರ್ಲಕ್ಷ್ಯ ವಹಿಸಿದ್ದರೋ ಅಥವಾ ಶೆಟ್ಟಿಜೊತೆ ಕೈಜೋಡಿಸಿದ್ದರೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಭಯ್ ಜೋಶಿ, ರಾಜೇಶ್ ಜಿಂದಾಲ್, ಅನಿಲ್ ಬನ್ಸಲ್ ಮುಂತಾದವರಿಗೆ ಈ ಬಿಸಿ ತಟ್ಟಿದೆ. 2015ರಲ್ಲಿ ಗೋಕುಲನಾಥ್ ಶೆಟ್ಟಿಬ್ರಾಡಿ ಹೌಸ್‌ನ ವಿದೇಶಿ ಖಾತೆಗಳ ವಿಭಾಗದಿಂದ ವರ್ಗಾವಣೆಯಾಗಿದ್ದಾಗ ಅದನ್ನು ರದ್ದುಪಡಿಸಿದ್ದ ಕಾರಣಕ್ಕೆ ಅನಿಲ್ ಬನ್ಸಲ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.