ಇನ್ನೊಂದು ಬ್ಯಾಂಕ್‌ ಹಗರಣ: ರೊಟೊಮ್ಯಾಕ್‌ ಪೆನ್‌ ಮಾಲೀಕ ಪರಾರಿ

By Suvarna Web DeskFirst Published Feb 19, 2018, 7:40 AM IST
Highlights

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ನೀರವ್‌ ಮೋದಿ ಮತ್ತು ಅವರ ಕುಟುಂಬ ಸದಸ್ಯರು 11400 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾದ ಬೆನ್ನಲ್ಲೇ, ಮತ್ತೊಂದು ದೊಡ್ಡ ಬ್ಯಾಂಕಿಂಗ್‌ ಹಗರಣ ಬೆಳಕಿಗೆ ಬಂದಿದೆ.

ಕಾನ್ಪುರ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ನೀರವ್‌ ಮೋದಿ ಮತ್ತು ಅವರ ಕುಟುಂಬ ಸದಸ್ಯರು 11400 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾದ ಬೆನ್ನಲ್ಲೇ, ಮತ್ತೊಂದು ದೊಡ್ಡ ಬ್ಯಾಂಕಿಂಗ್‌ ಹಗರಣ ಬೆಳಕಿಗೆ ಬಂದಿದೆ. ಪ್ರಖ್ಯಾತ ‘ರೋಟೋಮ್ಯಾಕ್‌’ ಪೆನ್‌ ಕಂಪನಿಯ ಮಾಲೀಕರು ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ 800 ಕೋಟಿ ರುಪಾಯಿ ಸಾಲ ಮಾಡಿ ಪರಾರಿಯಾಗಿದ್ದಾರೆ.

ಕಂಪನಿಯ ಮಾಲೀಕ ವಿಕ್ರಮ್‌ ಕೊಠಾರಿ 5 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಸುಮಾರು 800 ಕೋಟಿ ರುಪಾಯಿಗೂ ಹೆಚ್ಚು ಸಾಲ ಮಾಡಿದ್ದಾರೆ. ಅಲಹಾಬಾದ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗಳೇ ಕೊಠಾರಿಗೆ ಸಾಲ ಕೊಟ್ಟಬ್ಯಾಂಕ್‌ಗಳು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ 485 ಕೋಟಿ ರು., ಅಲಹಾಬಾದ್‌ ಬ್ಯಾಂಕ್‌ನಿಂದ 352 ಕೋಟಿ ರು. ಸಾಲ ಪಡೆದಿದ್ದಾರೆ. ಉಳಿದ 3 ಬ್ಯಾಂಕ್‌ಗಳಿಂದ ಅಲ್ಪಸ್ವಲ್ಪ ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಕಾನ್ಪುರ ಸಿಟಿ ಸೆಂಟರ್‌ನಲ್ಲಿ ಕೊಠಾರಿ ಅವರ ಕಚೇರಿ ಇದೆ. ಆದರೆ ಕಳೆದ 1 ವಾರದಿಂದ ಕಚೇರಿಗೆ ಬೀಗ ಹಾಕಲಾಗಿದೆ. ಕೊಠಾರಿ ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಲಹಾಬಾದ್‌ ಬ್ಯಾಂಕ್‌ ಮ್ಯಾನೇಜರ್‌ ರಾಜೇಶ್‌ ಗುಪ್ತಾ, ‘ಕೊಠಾರಿ ಅವರು ಸಾಲ ಕಟ್ಟದೇ ಹೋದರೆ ಆಸ್ತಿಗಳನ್ನು ಜಪ್ತಿ ಮಾಡಿ ಸಾಲ ವಸೂಲಿ ಮಾಡಲಾಗುವುದು’ ಎಂದರು.

click me!