ಮಹದಾಯಿ: ಗೋವಾ ಬೆಂಬಲಕ್ಕೆ ಮಹಾರಾಷ್ಟ್ರ

By Suvarna Web DeskFirst Published Feb 19, 2018, 7:31 AM IST
Highlights

- ನ್ಯಾಯಾಧಿಕರಣದ ಮುಂದೆ ಗೋವಾ, ಮಹಾರಾಷ್ಟ್ರ ವಾದ

- ಇಂದು ಕರ್ನಾಟಕ ಪರ ವಕೀಲರಿಂದ ಮತ್ತೆ ವಾದ ಮಂಡನೆ

- ಮಹದಾಯಿ ವಾದ

ನವದೆಹಲಿ: ನಾವು ಮಳೆ ನೀರು ಕೊಯ್ಲು ಕಡ್ಡಾಯ ಮಾಡಿದ್ದೇವೆ. ಆದರೆ ಮಳೆ ಕೊಯ್ಲಿನಿಂದಾಗಿ ಸಂಗ್ರಹವಾಗುವ ನೀರು ಖಾಸಗಿ ಸ್ವತ್ತಾಗಿದ್ದು ರಾಜ್ಯದ ನದಿ, ಜಲಾಶಯಗಳಿಗೆ ಸೇರುವುದಿಲ್ಲ. ಆದ್ದರಿಂದ ಈ ನೀರಿನ ಪ್ರಮಾಣ ಲೆಕ್ಕ ಹಾಕಲು ರಾಜ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದು ಗೋವಾ ಹೇಳಿದೆ.

ಮಹದಾಯಿ ನ್ಯಾಯಾಧಿಕರಣದಲ್ಲಿ ಭಾನುವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಗೋವಾದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ… ಆತ್ಮಾರಾಮ ನಾಡಕರ್ಣಿ, 16 ಚೆಕ್‌ ಡ್ಯಾಂಗಳ ಮೂಲಕ ಈ ನೀರಿನ ಸಂಗ್ರಹಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಗೋವಾ ಬಳಿ 9 ನದಿಗಳಿವೆ. ಆದರೆ ಕರ್ನಾಟಕದಲ್ಲಿ 35 ನದಿಗಳಿವೆ. ಮಹದಾಯಿ ಗೋವಾದ ಜೀವನದಿ. ಆದರೆ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಾಕಷ್ಟುನದಿಗಳಿವೆ ಎಂದು ನಾಡಕರ್ಣಿ ವಾದಿಸಿದರು.

ಕರ್ನಾಟಕ ತನ್ನ ನೀರಿನ ಬೇಡಿಕೆಯಲ್ಲಿ ಪರಿಸರ ಬಳಕೆಗೆ ಹಂಚೇ ಇಲ್ಲ. ಪರಿಸರಕ್ಕೆ ನೀರು ನೀಡುವುದು ಕೇವಲ ಗೋವಾದ ಬಾಧ್ಯತೆಯಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ಕೂಡ ಪರಿಸರಕ್ಕೆಂದು ನೀರು ನೀಡಬೇಕು. ಸಮುದ್ರಕ್ಕೆ ನೀರು ಸೇರುವುದು ನೈಸರ್ಗಿಕ ಪ್ರಕ್ರಿಯೆ ಎಂದು ವಾದಿಸಿದರು.

ಗೋವಾದ ವಾದ ಬೆಂಬಲಿಸಿದ ಮಹಾರಾಷ್ಟ್ರ:

ನಂತರ ಮಹಾರಾಷ್ಟ್ರ ಪರ ವಾದ ಮಂಡನೆ ಮಾಡಿದ ವಕೀಲ ಡಿ.ಎಂ. ನಾಗೋಲ್ಕರ್‌, ರಾಜ್ಯಗಳ ನೈಜ ಅಗತ್ಯವನ್ನು ನ್ಯಾಯಾಧಿಕರಣ ನಿರ್ಧರಿಸಬೇಕು. ಕೊಳ್ಳದೊಳಗಿನ ಬೇಡಿಕೆಗೆ ಒತ್ತು ನೀಡಬೇಕು ಎಂದು ವಾದಿಸಿದರು.

ಕೃಷ್ಣಾ ನದಿ ನೀರಿನಲ್ಲಿ ಕೃಷ್ಣಾ ನ್ಯಾಯಾಧಿಕರಣ ರಚನೆ ಆಗುವ ಮುಂಚಿತವಾಗಿ ಆಂಧ್ರಪ್ರದೇಶ 750 ಟಿಎಂಸಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರಣ ನೀಡಿ ಅದನ್ನು ರಕ್ಷಿಸಲಾಗಿತ್ತು. ಈ ಪ್ರಕರಣದಲ್ಲೂ ಪ್ರಸ್ತುತ ಬಳಕೆಯನ್ನು ರಕ್ಷಿಸಬೇಕು ಎಂದು ವಾದಿಸಿದರು.

ನ್ಯಾಯಾಧಿಕರಣವು ಈ ಪ್ರಕರಣದಲ್ಲಿ ಅಡಕವಾಗಿರುವ ಎಲ್ಲ (ಪರಿಸರ, ಅಂತರ್‌ ಕೊಳ್ಳ) ಮುಂತಾದ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಬೇಕು. ಪರಿಸರದ ಅಗತ್ಯಗಳನ್ನು ಗಮನಿಸಬೇಕು. ಗೋವಾವು ಮಹದಾಯಿಯನ್ನು ಕರ್ನಾಟಕ ನದಿ ಪಾತ್ರದ ಹೊರಗೆ ಕೊಂಡೊಯ್ಯುತ್ತದೆ ಎಂಬ ಆತಂಕದಿಂದ ಅದು ದೂರು ಸಲ್ಲಿಸಿದೆ. ಆದ್ದರಿಂದ ಗೋವಾವು ಪೂರ್ವಗ್ರಹದಿಂದ ದೂರು ಸಲ್ಲಿಸಿದೆ ಎಂಬುದು ಸರಿಯಲ್ಲ ಎಂದು ನಾಗೋಲ್ಕರ್‌ ಹೇಳಿದರು.

ಕರ್ನಾಟಕವು ಸೋಮವಾರ ಮತ್ತೆ ವಾದ ಮಂಡನೆ ಮಾಡಲಿದೆ. ಹಿರಿಯ ನ್ಯಾಯವಾದಿ ಅಶೋಕ್‌ ದೇಸಾಯಿ ವಾದ ಮಂಡಿಸಲಿದ್ದಾರೆ.

click me!